ಜಿಂದಾಲ್‌ನಿಂದ ಕಡಿಮೆ ಬೆಲೆಗೆ ಭೂಮಿ ಗುತ್ತಿಗೆ ಖಂಡನೀಯ, ತುಂಗಭದ್ರಾ ರೈತ ಸಂಘದ ಪುರುಷೋತ್ತಮಗೌಡ ಹೇಳಿಕೆ

Purushottam Gouda Darur 3
Published on

ಬಳ್ಳಾರಿ: ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಜಿಂದಾಲ್ ಕಾರ್ಖಾನೆ ಸೋಲಾರ್ ಪ್ಲ್ಯಾಂಟ್ ಹಾಕಲು ಕಡಿಮೆ ದರದಲ್ಲಿ ಭೂಮಿ ಗುತ್ತಿಗೆ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಹೇಳಿದರು.

ಜಿಂದಾಲ್ ಕಾರ್ಖಾನೆ ಹೊರಸೂಸುವ ಧೂಳಿನಿಂದ 3 ಸಾವಿರ ಎಕರೆ ಭೂಮಿಯಲ್ಲಿ 15 ವರ್ಷದಿಂದ ಏನು ಬೆಳೆಯಲಾಗುತ್ತಿಲ್ಲ. ಈ ಭೂಮಿಯಲ್ಲಿ ಸೋಲಾರ್ ಪ್ಲ್ಯಾಂಟ್ ಹಾಕಲು ಜಿಂದಾಲ್ ಮುಂದೆ ಬಂದಿದ್ದು, ವರ್ಷಕ್ಕೆ ಕೇವಲ 20 ಸಾವಿರ ರೂ.ಗೆ ಗುತ್ತಿಗೆ ನೀಡಲು 1600 ರೈತರಿಗೆ ಒಪ್ಪಿಗೆ ಪತ್ರ ನೀಡುತ್ತಿದೆ. ಪ್ರತಿ ಎಕರೆಗೆ 35 ಸಾವಿರ ರೂ.ಕೊಡಬೇಕು ಹಾಗೂ ವರ್ಷ ಶೇ.5 ಗುತ್ತಿಗೆ ಮೊತ್ತ ಹೆಚ್ಚಿಸಬೇಕು. ಮುಂಗಡವಾಗಿ 50 ಸಾವಿರ ರೂ. ಕೊಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಲ್ಲದೆ ಕೃಷಿ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆ ತಕ್ಕಂತೆ ಉದ್ಯೋಗ ನೀಡಬೇಕು. ಯು.ರಾಜಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಉಚಿತ ವಿದ್ಯುತ್ ಕೊಡಬೇಕು. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ರಾಜಾಪುರ ಗ್ರಾಮದ ರೈತರಾದ ಡಿ.ಎಸ್.ಗಂಗಣ್ಣ, ಜಲ್ಲಿ ಹನುಮಂತಪ್ಪ, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net