

ಬೆಳಗಾವಿ: ಕೆಎಲ್‌ಇ ಸಂಸ್ಥೆ ಸಪ್ತರ್ಷಿಗಳಲ್ಲಿ ಒಬ್ಬರಾದ ಶಿರಸಂಗಿ ಲಿಂಗರಾಜರು ತಮ್ಮ ಎಲ್ಲ ಆಸ್ತಿಯನ್ನು ಸಮಾಜದ ಬಡಮಕ್ಕಳ ಶಿಕ್ಷಣಕ್ಕಾಗಿ ಧಾರೆಯೆರೆದು ಮಹಾದಾನಿ ಎಂದು ಗುರುತಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಗೋಪಾಲ ಜಿನಗೌಡರು ಸಹ ಸ್ವಂತ ಹಣದಿಂದ ಸಂಸ್ಥೆ ಹುಟ್ಟುಹಾಕಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇದು ಶ್ಲಾಘನೀಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಶಿಂದೊಳ್ಳಿ ಗ್ರಾಮದ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 25ನೇ ವಾರ್ಷಿಕ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆಯ ಸಪ್ತರ್ಷಿಗಳಲ್ಲಿ ಹಿರಿಯರಾದ ಮಮದಾಪೂರ ತಮ್ಮ ಇಡೀ ಜೀವನ ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು. ಸಪ್ತರ್ಷಿಗಳನ್ನು ಕರೆ ತಂದು ಕೆಎಲ್‌ಇ ಸಂಸ್ಥೆ ಪ್ರಾರಂಭಿಸಿದರು. ಇದೀಗ ಗೋಪಾಲ ಜಿನಗೌಡ ಅವರಂತಹ ದಾನಿ ಮತ್ತು ಸಮಾಜ ಚಿಂತಕರನ್ನು ನಮ್ಮದೊಂದಿಗೆ ಇರುವುದು ನಮ್ಮೆಲ್ಲರ ಭಾಗ್ಯ ಎಂದರು.
ಹಿರಿಯ ಪತ್ರಕರ್ತ ಅಜಿತ್ ಹನಮಕ್ಕನವರ ಮಾತನಾಡಿ, ಮುಂದಿನ 20 ವರ್ಷಗಳಲ್ಲಿ ಅನೇಕ ಬದಲಾವಣೆಗಳಾಗಬಹುದು. ಈ ನಿಟ್ಟಿನಲ್ಲಿ ಕಾಲಕ್ಕೆ ಅನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಮುಂದೆ ಆಗಲಿರುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಯಬೇಕು ಮತ್ತು ಈ ಅಧ್ಯಯನಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂದು ತಿಳಿಸಿದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಮಾತನಾಡಿ, ಗೋಪಾಲ ಜಿನಗೌಡ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಇವೆಲ್ಲವನ್ನು ನಾವು ಅವರಿಂದ ಕಲಿಯಬೇಕಾಗಿದೆ. ಇಂತಹ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ಮಾದರಿ ಎಂದು ಹೇಳಿದರು.
ಆರ್.ಎಸ್.ಎಸ್. ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಅರವಿಂದರಾವ ದೇಶಪಾಂಡೆ ಮಾತನಾಡಿ, ಗೋಪಾಲ ಜಿನಗೌಡ ಶಾಲೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಇಲ್ಲ. ಅಪ್ಪಟ ಭಾರತೀಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಕಂಡು ಹರ್ಷವಾಗುತ್ತದೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ, ರಾಷ್ಟ್ರೀಯ ಅಲ್ಪಸಂಖ್ಯಾತರರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಎಸಿಪಿಆರ್ ಕಾರ್ಯದರ್ಶಿ ಮಾರುತಿ ಝಿರಲಿ, ವಿದ್ಯಾ ಭಾರತಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ಹೆಗಡೆ ಮಾತನಾಡಿದರು. ಗೋಪಾಲ ಜಿನಗೌಡ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗೋಪಾಲ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ ಹನಮಣ್ಣವರ, ಹಿರಿಯ ವಕೀಲ ರವಿರಾಜ ಪಾಟೀಲ, ಹುಕ್ಕೇರಿಯ ಮಹಾವೀರ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ರಾಯಬಾಗ ಲಕ್ಷ್ಮೀಸೇನ ಎಜುಕೇಶನ್ ಸೊಸೈಟಿ ಅಧ್ಯಕ್ಷ ದಶರಥ ಶೆಟ್ಟಿ ಇದ್ದರು.