ಜಿಲ್ಲೆಯಲ್ಲಿ 51 ಕಿ.ಮೀ. ಮಾನವ ಸರಪಳಿ

13 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ 51 ಕಿ.ಮೀ ವರೆಗೆ ಮಾನವ ಸರಪಳಿ ನಿಮಿರ್ಸಲಾಗುವುದು. ಸುಮಾರು 79 ಸಾವಿರ ಜನ ಪಾಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ದಿನದಂದು ದೇಶದ ನಾಗರಿಕರಿಗೆ ವಿಶೇಷವಾಗಿ ರಾಜ್ಯದ ನಾಗರಿಕರಿಗೆ ಅರಿವು ಮೂಡಿಸಲು ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆವರೆಗೆ ಸುಮಾರು 2,500 ಕಿ.ಮೀ. ಮಾನವ ಸರಪಳಿ ರಚಿಸುವ ಮೂಲಕ ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಜಿಲ್ಲೆಯಲ್ಲಿ ಸಹ ಮಾನವ ಸರಪಳಿ ಕಾರ್ಯಕ್ರಮವು ತೇಗೂರ ಗ್ರಾಮದಿಂದ ಆರಂಭವಾಗಿ ಗುಳೇದಕೊಪ್ಪ, ವೆಂಕಟಾಪುರ, ಶಿಂಗನಹಳ್ಳಿ, ಕೋಟೂರ, ಬೇಲೂರ, ಮುಮ್ಮಿಗಟ್ಟಿ. ಕೆ.ಎಂ. ನರೇಂದ್ರ, ಜುಬಿಲಿ ವೃತ್ತವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಲಿದ್ದು, ನಂತರ ಸಲಕಿನಕೊಪ್ಪ, ಬಾಡ, ಬೆನಕನಕಟ್ಟಿ, ನಿಗದಿ, ಮುರಕಟ್ಟಿ, ಹಳ್ಳಿಗೇರಿ, ಹುಲ್ತಿಕೋಟಿ ಹಾಗೂ ಉತ್ತರ ಕನ್ನಡ ಜಿಲ್ಲೆ ಸರಹದ್ದು ಮಾವಿನಕೊಪ್ಪ ಗ್ರಾಮದ ವರೆಗೆ ಒಟ್ಟು 51 ಕಿ.ಮೀ ಉದ್ದದ ಮಾನವ ಸರಪಳಿ ನಿಮಿರ್ಸಲಾಗುವುದು ಎಂದರು.
ಸೆ. 15ರಂದು ಬೆಳಗ್ಗೆ 9.30ಕ್ಕೆ ನಗರದ ಕೆಸಿಡಿ ಮೈದಾನದಲ್ಲಿ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಚಾಲನೆ ನೀಡುವರು. ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಇತರರು ಸೇರಿದಂತೆ 79,500 ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net