ಜಿಲ್ಲೆಯ ಕಾಲೇಜುಗಳಲ್ಲಿ ಕಲರವ, ಉತ್ಸಾಹ, ಆತಂಕದ ನಡುವೆ ವಿದ್ಯಾರ್ಥಿಗಳು ಮೊದಲ ದಿನ ಪ್ರಾಯೋಗಿಕ ತರಗತಿ

17 Nela ph 02 Covid Test
Published on

ಬೆಂಗಳೂರು ಗ್ರಾಮಾಂತರ: ಕರೊನಾ ಟೆಸ್ಟ್ ಆಗಿದೆಯೇ ರಿಪೋರ್ಟ್ ಕೊಡಿ ಎಂಬ ಸಿಬ್ಬಂದಿ ಆಜ್ಞೆ, ತಗೋಳಿ ನನಗೆ ನೆಗೆಟಿವ್ ಎಂದು ತುಂಟ ನೋಟದಿಂದ ರಿಪೋರ್ಟ್ ತೋರಿಸಿ ಕಾಲೇಜಿನ ಮೆಟ್ಟಿಲು ಹತ್ತಲು ತವಕಿಸಿದ ವಿದ್ಯಾರ್ಥಿಗಳು... ಗುಲಾಬಿ ನೀಡಿ ಕಾಲೇಜು ಕೊಠಡಿಯತ್ತ ಸ್ವಾಗತಿಸಿದ ಕಾಲೇಜು ಸಿಬ್ಬಂದಿ... ಪಾಲಕರ ಕರೊನಾಂತಕದ ನಡುವೆಯೂ ತಗ್ಗದ ವಿದ್ಯಾರ್ಥಿಗಳ ಉತ್ಸಾಹದೊಂದಿಗೆ ಜಿಲ್ಲೆಯ ವಿವಿಧ ಕಾಲೇಜುಗಳು ಮಂಗಳವಾರ ವಿದ್ಯಾರ್ಥಿಗಳ ಆಗಮನದಿಂದ ಕಳೆಕಟ್ಟಿತ್ತು. ಬರೋಬ್ಬರಿ 9 ತಿಂಗಳ ಬಳಿಕ ಕಾಲೇಜಿನಲ್ಲಿ ಕಲರವ ಕಂಡುಬಂತು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಪ್ರಥಮ ದರ್ಜೆ ಕಾಲೇಜುಗಳು ಬುಧವಾರ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಲಕ ಸಿದ್ಧತೆ ನಡೆಸಿದ್ದವು. ವಿದ್ಯಾರ್ಥಿಗಳು ಉತ್ಸಾಹದಿಂದಲೇ ಕಾಲೇಜುಗಳ ಕಡೆ ಹೆಜ್ಜೆ ಹಾಕಿದರಾದರೂ ಪಾಲಕರ ಆತಂಕದ ಜತೆಗೆ ವಿದ್ಯಾರ್ಥಿಗಳೂ ಭೀತಿಯಿಂದ ಕಣ್ಣು ಮಿಟುಕಿಸುತ್ತಿದ್ದದ್ದು ಕಂಡುಬಂತು.

ಬಸ್‌ಗಳಲ್ಲಿ ಬರಬೇಕಿದ್ದ ಬಹಳಷ್ಟು ವಿದ್ಯಾರ್ಥಿಗಳು ಕರೊನಾ ಕಾರಣದಿಂದ ಮೊದಲ ದಿನ ಕಾಲೇಜು ಮೆಟ್ಟಿಲು ತುಳಿಯಲು ಹಿಂದೇಟು ಹಾಕಿದರು. ಕಾಲೇಜಿಗೆ ಬಂದರೆ ಕರೊನಾ ತಪಾಸಣೆ ನಡೆಸುತ್ತಾರೆ ಎಂಬ ಆತಂಕದಿಂದ ಮತ್ತಷ್ಟು ವಿದ್ಯಾರ್ಥಿಗಳು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಕಾಲೇಜು ಸಿಬ್ಬಂದಿ ಕರೊನಾ ಸಂಬಂಧಿಸಿದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಬಹುತೇಕ ಕಾಲೇಜುಗಳಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳ ದರ್ಶನ ಕಂಡುಬಂತು.

ಹೊಸಕೋಟೆಯಲ್ಲಿ 97 ವಿದ್ಯಾರ್ಥಿಗಳು ಹಾಜರು: ಹೊಸಕೋಟೆ ನಗರದ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳ ಹಾಜರಿ ಕಂಡುಬಂತು.ತಾಲೂಕಿನಲ್ಲಿನ ಮೂರು ಕಾಲೇಜುಗಳಲ್ಲಿ ಕರೊನಾ ತಪಾಸಣೆಗೆ 4 ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದ್ದು, ಹಾಜರಾದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಸಿಬ್ಬಂದಿಗೆ ಕರೊನಾ ತಪಾಸಣೆ ಮಾಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿರುವುದರಿಂದ ಅವರ ರಿಪೋರ್ಟ್ ತೆಗೆದುಕೊಂಡು 19 ರಂದು ಕಾಲೇಜಿಗೆ ಬರಲು ಸೂಚಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿಗಳು ತಿಳಿಸಿವೆ.

ತ್ಯಾಮಗೊಂಡ್ಲುವಿನಲ್ಲಿ ಆರೋಗ್ಯ ತಪಾಸಣೆ: ಪಟ್ಟಣದಲ್ಲಿರುವ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಕರೊನಾ ತಪಾಸಣೆಗೆ ಸೂಚಿಸಿದ್ದರಿಂದ ಬುಧವಾರ ಎಲ್ಲ ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೊನಾ ತಪಾಸಣೆಗೊಳಗಾದರು. ಕಾಲೇಜಿನಲ್ಲಿ ಎಲ್ಲ ಸಿಬ್ಬಂದಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿದೆ. ಕಾಲೇಜಿನಲ್ಲಿ ಅಂತಿಮ ವರ್ಷದ ಕಲಾ ವಿಭಾಗದಲ್ಲಿ 44 ಹಾಗೂ ವಾಣಿಜ್ಯ ವಿಭಾಗದಲ್ಲಿ 51 ಸೇರಿ 85 ವಿದ್ಯಾರ್ಥಿಗಳು ಬರಬೇಕಿದೆ. ಕರೊನಾ ನೆಗಟಿವ್ ಪ್ರಮಾಣಪತ್ರ ಕಡ್ಡಾಯದಿಂದಾಗಿ ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದಾರೆ, ಪ್ರತಿ ಕೊಠಡಿಯನ್ನು ಸ್ಯಾನಿಟೈಸ್ ಮಾಡಿಸಲಾಗಿದ್ದು ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಪ್ರೊ ಕೆ.ಸಿ.ಬಸವರಾಜು ತಿಳಿಸಿದರು.

ನೆಲಮಂಗಲದಲ್ಲಿ 60 ವಿದ್ಯಾರ್ಥಿಗಳು ಹಾಜರಿ: ನೆಲಮಂಗಲ ನಗರದ 2 ಖಾಸಗಿ ಮತ್ತು 1 ಸರ್ಕಾರಿ ಪ್ರಥಮ ಕಾಲೇಜುಗಳ ಪೈಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾತ್ರ ಆರಂಭಗೊಂಡಿದ್ದು, ಅಂತಿಮ ವರ್ಷದ ಪದವಿ ತರಗತಿಗಳು ಆರಂಭವಾಗಿವೆ. ಬುಧವಾರ 300 ವಿದ್ಯಾರ್ಥಿಗಳ ಪೈಕಿ 60 ವಿದ್ಯಾರ್ಥಿಗಳು ಹಾಜರಾಗಿದ್ದರು. ಉಳಿದಂತೆ ಸಿದ್ಧಗಂಗಾ ಪ್ರಥಮದರ್ಜೆ ಕಾಲೇಜು ಹಾಗೂ ಶ್ರೀ ಬಸವೇಶ್ವರ ಮಹಿಳಾ ಪ್ರಥಮದರ್ಜೆ ಕಾಲೇಜು ನ.19 ರಂದು ಪ್ರಾರಂಭಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.

ನಗರಸಭೆ ಸಹಕಾರದಿಂದ ಕಾಲೇಜಿನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಸೇರಿ ಕರೊನಾ ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಅವಕಾಶ ಕಲ್ಪಿಸಲಾಯಿತು. ನ.13 ರಂದು ಆರೋಗ್ಯ ಇಲಾಖೆ ಸಹಕಾರದಲ್ಲಿ ಕಾಲೇಜಿನ ಉಪನ್ಯಾಸಕರು, ಅತಿಥಿಉಪನ್ಯಾಸಕರು, ಸಿಬ್ಬಂದಿ ಸೇರಿ ಕೆಲ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಿದ್ದು, ವರದಿ ಬಂದಿಲ್ಲ ಎಂದು ಸರ್ಕಾರಿ ಕಾಲೇಜು ಪ್ರಾಂಶುಪಾಲ ಪ್ರೋ.ಬಾಲಕೃಷ್ಣಯ್ಯ ತಿಳಿಸಿದರು.

ದೊಡ್ಡಬಳ್ಳಾಪುರದಲ್ಲಿ ನೀರಸ: ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಕ್ಕೆ ಬಿಡಲಾಗುತ್ತಿತ್ತು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜು, ಲಾವಣ್ಯಾ ಪದವಿ ಕಾಲೇಜು, ಜಾಲಪ್ಪ ಕಾಲೇಜು ಸೇರಿ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಿ ಕಡಿಮೆ ಇತ್ತು. ಕೆಲವೆಡೆ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ವರದಿ ಸಲ್ಲಿಸಿದರೆ, ಉಳಿದೆಡೆ ಕಾಲೇಜುಗಳಲ್ಲಿ ಸಿಬ್ಬಂದಿಯೊಂದಿಗೆ, ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net