

ಶಿವರಾಜ ಎಂ. ಬೆಂಗಳೂರು
ನವಜಾತ ಶಿಶುಗಳ ಮರಣ ಮತ್ತು ಮಕ್ಕಳ ಅಪೌಷ್ಟಿಕತೆ ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರದ ಪೋಷಣಾ ಯೋಜನೆ ಅನುಷ್ಠಾನಕ್ಕೆ ಗ್ರಾಮಾಂತರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದೆ.
ಪ್ರಮುಖವಾಗಿ ಗೋಡೆಬರಹ, ಬೀದಿನಾಟಕ ಹಾಗೂ ಕರಪತ್ರ ಹಂಚಿಕೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಪೋಷಣಾ ಅಭಿಯಾನ ಅನುಷ್ಠಾನಕ್ಕೆ ಶ್ರಮಿಸುತ್ತಿದೆ. ಮಗುವಿಗೆ 6 ತಿಂಗಳವರೆಗೆ ಎದೆಹಾಲು ನೀಡಿದ ನಂತರ ಮೇಲು ಆಹಾರ ಪ್ರಾರಂಭಿಸುವ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮ ಆರಂಭಿಸಿದೆ.
ಜಿಲ್ಲೆಯಲ್ಲಿ ಚುರುಕು: ಅಪೌಷ್ಟಿಕ ಸಮಸ್ಯೆ ನೀಗಿಸುವಲ್ಲಿ ಕರ್ನಾಟಕದ ಸಾಧನೆ ನಿರಾಶದಾಯಕವಾಗಿದೆ. ಅನುದಾನದ ಬಳಕೆಯಲ್ಲಿ ಮುಂದಿದ್ದರೂ ನಿಶ್ಚಿತ ಗುರಿ ತಲುಪುವಲ್ಲಿ ರಾಜ್ಯ ಹಿಂದುಳಿದಿದೆ ಎಂಬ ಈ ಅಭಿಯಾನದ ಪ್ರಗತಿಗೆ ಸಂಬಂಧಿಸಿದ ನೀತಿ ಆಯೋಗ ವರದಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಯಾನ ಇತ್ತೀಚಿಗೆ ಚುರುಕು ಪಡೆದಿದೆ. ಅದರಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಭಿಯಾನ ಕಾಲಿಟ್ಟಿದೆ.
3ನೇ ಹಂತದಲ್ಲಿ ಜಿಲ್ಲೆಯಲ್ಲಿ ಜಾರಿ: ನ್ಯಾಷನಲ್ ನ್ಯೂಟ್ರಿಷನ್ ಮಿಷನ್ (ಪೋಷಣ್ ಅಭಿಯಾನ್ ಯೋಜನೆ) 3 ವರ್ಷದ ಅವಧಿಗೆ ಜಾರಿಗೆ ತರಲು ಉದ್ದೇಶಿಸಿದ್ದು, ಬಾಗಲಕೋಟೆ, ಬಳ್ಳಾರಿ, ಬೀದರ್, ದಾವಣಗೆರೆ, ಹಾವೇರಿ, ಕೊಪ್ಪಳ, ಯಾದಗಿರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಅದೇ ರೀತಿ ಎರಡನೇ ಹಂತದಲ್ಲಿ ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಗದಗ್, ಕೋಲಾರ, ಕೊಡಗು, ರಾಯಚೂರು, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಂಜೂರಾಗಿದೆ. ಮೂರನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣಕನ್ನಡ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು 2018ರ ಡಿಸೆಂಬರ್‌ನಲ್ಲಿ ಮಂಜೂರಾತಿ ದೊರೆತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಯೋಜನೆ ಕಾಲಿಟ್ಟಿದೆ.
ಸಾವಿರ ದಿನ ಆರೈಕೆ: ಮಗುವಿನ ಮೊದಲ ಸಾವಿರ ದಿನದ ಅವಧಿಯಲ್ಲಿನ ಆರೈಕೆಗಾಗಿ ಜಾರಿಗೆ ತಂದಿರುವ ಪೋಷಣಾ ಅಭಿಯಾನ ಯಶಸ್ವಿಗೊಳಿಸಲು ಇಲಾಖೆ ಪೂರ್ವ ಸಿದ್ಧತಾ ಸಭೆ ನಡೆಸಿದ್ದು, ವ್ಯಾಪಕ ಪ್ರಚಾರ ನಡೆಸುತ್ತಿದೆ. ಗರ್ಭಾವಸ್ಥೆಯಿಂದ ಹಿಡಿದು ಮಗುವಿನ ಆರೋಗ್ಯಕರ ಪೋಷಣೆ ಈ ಯೋಜನೆ ಪ್ರಮುಖ ಉದ್ದೇಶವಾಗಿದೆ.
ಸಮುದಾಯ ಆಧಾರಿತ ಚಟುವಟಿಕೆ: ತಿಂಗಳ ಮೊದಲ ಹಾಗೂ ಕಡೇ ಶುಕ್ರವಾರದಂದು ಸಮುದಾಯ ಆಧಾರಿತ ಚಟುವಟಿಕೆಗಳ ಮೂಲಕ ಅಭಿಯಾನ ಸಾಕಾರಕ್ಕೆ ಇಲಾಖೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಜನಾಂದೋಲನ ಪರಿಕಲ್ಪನೆ ಮೂಲಕ ಫಲಾನುಭವಿಗಳ ಜತೆಗೆ ಅವರ ಕುಟುಂಬ, ಸಮುದಾಯ ಹಾಗೂ ಚುನಾಯಿತ ಪ್ರತಿನಿಧಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ತಾಯಿ ಮತ್ತು ಮಗುವಿನ ಆರೈಕೆ ಜತೆಗೆ ಇತರೆ ಅವಶ್ಯಕ ವಿಷಯಗಳ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಪೋಷಣಾ ಅಭಿಯಾನಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಾದ್ಯಂತ ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ವಿಶೇಷ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಖ್ಯವಾಗಿ ಈ ಅಭಿಯಾನದ ಬಗ್ಗೆ ಜಿಲ್ಲೆಯಲ್ಲಿ ದೊಡ್ಡಮಟ್ಟದ ಜಾಗೃತಿ ಮೂಡಿಸಲಾಗುತ್ತಿದೆ. ಪುಷ್ಪಾರಾಯ್ಕರ್, ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಇಲಾಖೆ ಗ್ರಾಮಾಂತರ ಅಂಗನವಾಡಿ ಕೇಂದ್ರ ಸೇರಿ ಇತರೇ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆಸುವುದು. ಅಭಿಯಾನದ ಕುರಿತು ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ ಆಯೋಜನೆ ಮತ್ತಿತರ ಕ್ರಮಕೈಗೊಳ್ಳಲಾಗಿದೆ. ಅನಿತಾಲಕ್ಷ್ಮೀ, ಶಿಶು ಅಭಿವೃದ್ಧಿ ಅಧಿಕಾರಿ ದೊಡ್ಡಬಳ್ಳಾಪುರ