

ಕೋಲಾರ: ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ತ್ರಿಪಕ್ಷ ಸೂತ್ರದಡಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಹೊಸ ಪರ್ವಕ್ಕೆ ನಾಂದಿ ಹಾಡಲಾಗಿದೆ.
ಇನ್ನು ಕೇವಲ 10 ತಿಂಗಳ ಅವಧಿಯಿರುವ ಹಣಕಾಸು ಮತ್ತು ಲೆಕ್ಕ ಪರಿಶೋಧನೆ, ಸಾಮಾನ್ಯ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ, ಸಂಸದ ಹಾಗೂ 6 ಮಂದಿ ಶಾಸಕರ ಆಶಯದಂತೆ ಸದಸ್ಯರು ಹಾಗೂ ಮೂರು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.
ಜೂ.10ರಂದೇ ಚುನಾವಣೆ ನಡೆಯಬೇಕಾಗಿತ್ತಾದರೂ ತಾಂತ್ರಿಕ ಹಾಗೂ ಕೋರಂ ಕೊರತೆ ನೆಪದಲ್ಲಿ ಮುಂದೂಡಲಾಗಿತ್ತು. ಸಮಿತಿಗಳಿಗೆ ಅವಿರೋಧ ಆಯ್ಕೆ ಜವಾಬ್ದಾರಿಯನ್ನು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜೆಡಿಎಸ್ ಹಿರಿಯ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿಗೆ ವಹಿಸಲಾಗಿತ್ತು.
5 ಸಮಿತಿಗಳಿಗೆ 25 ಸದಸ್ಯರನ್ನು ಮೊದಲು ಆಯ್ಕೆ ಮಾಡಿ ನಂತರ ಸಂಜೆ ಹಣಕಾಸು ಮತ್ತು ಲೆಕ್ಕ ಪರಿಶೋಧನೆ, ಸಾಮಾನ್ಯ ಸಮಿತಿಗೆ ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧ್ಯಕ್ಷರಾಗಿರುವುದರಿಂದ ಉಳಿದ ಮೂರು ಸಮಿತಿಗೆ ಅಧ್ಯಕ್ಷರ ಆಯ್ಕೆಗೆ ತೀವ್ರ ಪೈಪೋಟಿ ಕಂಡು ಬಂದಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರನ್ನು ಒಪ್ಪಿಸಲು ಸಿ.ಎಸ್.ವೆಂಕಟೇಶ್ ಮತ್ತು ತೂಪಲ್ಲಿ ನಾರಾಯಣಸ್ವಾಮಿ ಸಾಹಸಪಟ್ಟರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ಬಂಗಾರಪೇಟೆಯ ದೊಡ್ಡೂರು ಕರಪನಹಳ್ಳಿಯಿಂದ ಆಯ್ಕೆಯಾಗಿರುವ ಬಿಜೆಪಿಯ ಬಿ.ವಿ.ಮಹೇಶ್, ಮಾಲೂರಿನ ಕುಡಿಯನೂರು ಕ್ಷೇತ್ರದ ಜೆಡಿಎಸ್‌ನ ಚಿನ್ನಸ್ವಾಮಿ ಗೌಡ ಹಾಗೂ ಮುಳಬಾಗಿಲಿನ ದುಗ್ಗಸಂದ್ರ ಕ್ಷೇತ್ರದ ಕಾಂಗ್ರೆಸ್ಸಿನ ವಿ.ಎಸ್.ಅರವಿಂದಕುಮಾರ್ ಆಕಾಂಕ್ಷಿಗಳಾಗಿದ್ದರು.
ಒಂದು ಸ್ಥಾನ ಮಹಿಳೆಗೆ ಬಿಟ್ಟುಕೊಡುವ ಸಲುವಾಗಿ ಕೆಜಿಎಫ್ ತಾಲೂಕಿನ ಬೇತಮಂಗಲ ಕ್ಷೇತ್ರದ ಬಿಜೆಪಿ ಸದಸ್ಯೆ ನಿರ್ಮಲಾ ವೆಂಕಟೇಶ್‌ಗೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರಿಂದ ಬಿ.ವಿ.ಮಹೇಶ್ ಕಣದಿಂದ ಹಿಂದೆ ಸರಿದು ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಟ್ಟರು.
ಕಾಂಗ್ರೆಸ್‌ನ ಅರವಿಂದ ಕುಮಾರ್ ಮತ್ತು ಜೆಡಿಎಸ್‌ನ ಚಿನ್ನಸ್ವಾಮಿ ಗೌಡ ನಡುವೆ ಅಧಿಕಾರಕ್ಕೆ ಹಗ್ಗಜಾಗ್ಗಟ ನಡೆದು 5 ತಿಂಗಳ ನಂತರ ಉಳಿಕೆ 5 ತಿಂಗಳಿಗೆ ಅವಕಾಶ ನೀಡುವುದಾಗಿ ಚಿನ್ನಸ್ವಾಮಿಗೌಡ ಒಪ್ಪಿದ್ದರಿಂದ ಅರವಿಂದ್ ನಾಮಪತ್ರ ವಾಪಸ್ ನಡೆದರು.
ಸಾಮಾಜಿಕ ನ್ಯಾಯ ಸಮಿತಿಗೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಬಣದ ಕಾಂಗ್ರೆಸ್ ಸದಸ್ಯ ವಕ್ಕಲೇರಿಯ ಅರುಣ್ ಪ್ರಸಾದ್ ಮತ್ತು ಮಾಲೂರು ತಾಲೂಕಿನ ಮಾಸ್ತಿ ಕ್ಷೇತ್ರದ ಜೆಡಿಎಸ್ ಸದಸ್ಯ ಎಚ್.ವಿ.ಶ್ರೀನಿವಾಸ್ ನಡುವೆ ಪೈಪೋಟಿ ಕಂಡು ಬಂದಿತಾದರೂ ಚಿನ್ನಸ್ವಾಮಿ ಗೌಡರಿಗೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯಲ್ಲಿ ಅವಕಾಶ ಕಲ್ಪಿಸಿದ್ದರಿಂದ ಅಂತಿಮವಾಗಿ ಅರುಣ್ ಪ್ರಸಾದ್‌ಗೆ ಅಧ್ಯಕ್ಷ ಭಾಗ್ಯ ಸಿಕ್ಕಿತು.
ಸಮಿತಿವಾರು ಆಯ್ಕೆ ವಿವರ:
ಹಣಕಾಸು ಮತ್ತು ಲೆಕ್ಕಪರಿಶೋಧನೆ ಸಮಿತಿ ಅಧ್ಯಕ್ಷ: ಸಿ.ಎಸ್.ವೆಂಕಟೇಶ್, ಜಿಪಂ ಅಧ್ಯಕ್ಷ. ಸಮಿತಿ ಸದಸ್ಯರು: ಮುನಿಲಕ್ಷ್ಮಮ್ಮ, ಗೀತಮ್ಮ,ಆರ್.ನಾರಾಯಣಸ್ವಾಮಿ, ಸಿ.ನಿರ್ಮಲಾ
ಸಾಮಾನ್ಯ ಸ್ಥಾಯಿ ಸಮಿತಿ: ಜಿಪಂ ಉಪಾಧ್ಯಕ್ಷೆ ಯಶೋದಮ್ಮ-ಅಧ್ಯಕ್ಷೆ. ಸದಸ್ಯರು, ಆರ್.ನಾರಾಯಣಸ್ವಾಮಿ, ಭಾಗ್ಯವತಿ, ಕೆ.ಎಸ್.ಮಾಲಾ, ಕೆ.ಎಸ್.ನಂಜುಂಡಪ್ಪ
ಸಾಮಾಜಿಕ ನ್ಯಾಯ ಸಮಿತಿ: ಅರುಣ್ ಪ್ರಸಾದ್-ಅಧ್ಯಕ್ಷ. ಸದಸ್ಯರು: ರತ್ಮಮ್ಮ, ನಾಗಮಣಿ, ಪಾರ್ವತಮ್ಮ, ಉಷಾ ವೆಂಕಟೇಶಗೌಡ
ಶಿಕ್ಷಣ ಮತ್ತು ಆರೋಗ್ಯ: ಚಿನ್ನಸ್ವಾಮಿಗೌಡ-ಅಧ್ಯಕ್ಷ. ಸದಸ್ಯರು: ವಿ.ಎಸ್.ಅರವಿಂದ ಕುಮಾರ್, ವಿ.ಎಂ.ಶ್ರೀನಿವಾಸ್, ಎಚ್.ವಿ.ಶ್ರೀನಿವಾಸ್, ರೂಪಶ್ರೀ ಮಂಜುನಾಥ್
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ: ಸಿ.ನಿರ್ಮಲಾ- ಅಧ್ಯಕ್ಷೆ. ಸದಸ್ಯರು: ಆರ್.ಕೃಷ್ಣಪ್ಪ, ಬಿ.ಎಂ.ಜಯಪ್ರಕಾಶ್, ಎಸ್.ಅಶ್ವಿನಿ, ಬಿ.ವಿ.ಮಹೇಶ್
ಸಂಸದರ ಹರ್ಷ: ಜಿಪಂ ಸ್ಥಾಯಿ ಸಮಿತಿಗಳಿಗೆ ತ್ರಿಸೂತ್ರದಡಿ ಪಕ್ಷಾತೀತವಾಗಿ ಅಧ್ಯಕ್ಷರು ಮತ್ತು ಸದಸ್ಯರು ಅವಿರೋಧ ಆಯ್ಕೆಯಾಗಿರುವುದಕ್ಕೆ ಸಂಸದ ಎಸ್.ಮುನಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಸಚಿವರು, ನಾನು ಮತ್ತು ಎಲ್ಲ ಶಾಸಕರು ಇದನ್ನೇ ಬಯಸಿದ್ದೆವು, ಜಿಪಂ ಸದಸ್ಯರು ಸಣ್ಣ-ಪುಟ್ಟ ಅಸಮಾಧಾನ ಮರೆತು ಒಗ್ಗಟ್ಟು ಪ್ರದರ್ಶಿಸಿರುವುದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಹಾಯಕವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.