ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗೆ ಕಸರತ್ತು

13-klr-10
Published on

ಕೋಲಾರ: ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದು, ತ್ರಿಪಕ್ಷ ಸೂತ್ರದಡಿ ಅಧಿಕಾರ ಹಂಚಿಕೆಗೆ ಕಸರತ್ತು ಮುಂದುವರಿದಿದೆ.

ಜಿಪಂ 5 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೊರತುಪಡಿಸಿ 23 ಸದಸ್ಯರು ಆಯ್ಕೆಯಾಗಬೇಕಿದೆ. ಈ ಸದಸ್ಯರು 3 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಅಧಿಕಾರ ಹೊಂದಿದ್ದಾರೆ. ಸ್ಥಾಯಿ ಸಮಿತಿಗಳಿಗೆ ಜೂ.10ರಂದು ನಿಗದಿಯಾಗಿದ್ದ ಚುನಾವಣೆ ಆಕಾಂಕ್ಷಿಗಳ ಹೆಚ್ಚಳ ಹಾಗೂ ಸಹಮತಕ್ಕೆ ಬರಲಾಗದೆ ಕೋರಂ ನೆಪದಲ್ಲಿ ಮುಂದೂಡಿದ್ದು, ಇದೇ ಜೂ.15ಕ್ಕೆ ಚುನಾವಣೆ ನಡೆಸಲು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

5 ಸಮಿತಿಗಳ ಪೈಕಿ ಸಾಮಾನ್ಯ ಮತ್ತು ಹಣಕಾಸು ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೇ ಸದರಿ ಸಮಿತಿಗೂ ಅಧ್ಯಕ್ಷರಾಗಿರುವುದರಿಂದ ಸದರಿ ಸಮಿತಿಗೆ ತಲಾ 4 ಸದಸ್ಯರು ಆಯ್ಕೆಯಾಗಬೇಕಿದ್ದು, ಉಳಿದ 3 ಸಮಿತಿಗಳಿಗೆ ತಲಾ 5 ಮಂದಿ ಸೇರಿ ಒಟ್ಟು 23 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿದೆ.

ಮಾಜಿ ಶಾಸಕ ವರ್ತೂರ್ ಪ್ರಕಾಶ್ ಬಣದ ಕಾಂಗ್ರೆಸ್ ಸದಸ್ಯ ಅರುಣ್ ಪ್ರಸಾದ್ ಸಾಮಾಜಿಕ ನ್ಯಾಯ, ಬಿಜೆಪಿಯ ಮಹೇಶ್ ಆರೋಗ್ಯ ಮತ್ತು ಶಿಕ್ಷಣ ಹಾಗೂ ಮಾಲೂರು ತಾಲೂಕಿನ ಕಾಂಗ್ರೆಸ್ ಸದಸ್ಯ ಚಿನ್ನಸ್ವಾಮಿ ಅವರು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಲು ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಿಂದ ಮೂರೂ ಸಮಿತಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದ್ದು, ಸದಸ್ಯರು ಅನಗತ್ಯ ಗೊಂದಲಕ್ಕೆ ಅವಕಾಶ ನೀಡದೆ ಕೊಟ್ಟು ತೆಗೆದುಕೊಳ್ಳುವ ಸಿದ್ಧಾಂತಕ್ಕೆ ತಲೆಬಾಗಿ ಒಮ್ಮತದಿಂದ ನಿರ್ಧಾರ ಕೈಗೊಳ್ಳದಿದ್ದರೆ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಈ ಹಿಂದೆಯೂ ಸ್ಥಾಯಿ ಸಮಿತಿ ಚುನಾವಣೆ ವೇಳೆ ತೀವ್ರ ಪೈಪೋಟಿ ಉಂಟಾಗಿದ್ದಾಗ ಆಗಿನ ಸಂಸದ ಕೆ.ಎಚ್.ಮುನಿಯಪ್ಪ ತ್ರಿಸೂತ್ರದಡಿ ಅಧಿಕಾರ ಹಂಚಿಕೆಗೆ ಒಲವು ತೋರಿದ್ದರಾದರೂ ಸಹಮತ ವ್ಯಕ್ತವಾಗದೆ ಚುನಾವಣೆ ನಡೆಸಲಾಗಿತ್ತು.

ಈ ಬಾರಿ ಸಚಿವರು ಮತ್ತು ಸಂಸದರೂ ಸಹ ತ್ರಿಪಕ್ಷಕ್ಕೆ ತಲಾ ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಗಬೇಕೆಂದು ಬಯಸಿದ್ದು, ಜಿಲ್ಲೆಯ ಶಾಸಕರ ಹಿಡಿತದಲ್ಲಿರುವ ಸದಸ್ಯರ ಮನಸ್ಸಿನಲ್ಲಿ ಏನಿದೆ ಎಂಬುದು ಗುಪ್ತಗಾಮಿನಿಯಂತಾಗಿದೆ.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅವರೂ ಅವಿರೋಧ ಆಯ್ಕೆಗಾಗಿ ಸದಸ್ಯರ ಮನವೊಲಿಕೆಗೆ ಕಸರತ್ತು ಮುಂದುವರಿಸಿದ್ದಾರೆ. ಭಾನುವಾರ ಸಂಜೆ ಮೂರು ಪಕ್ಷಗಳ ಮುಖಂಡರು ಪ್ರತ್ಯೇಕ ಸಭೆ ನಡೆಸಿ ತಮ್ಮ ಕಡೆಯವರನ್ನು ಗೆಲ್ಲಿಸಿಕೊಳ್ಳುವುದಕ್ಕೆ ರಣತಂತ್ರ ರೂಪಿಸಲು ನಿರ್ಧರಿಸಿದ್ದಾರೆ. ಬಿಜೆಪಿಯ ಮಹೇಶ್ ಅಧ್ಯಕ್ಷ ಸ್ಥಾನಕ್ಕಾಗಿ ಮೂರೂ ಪಕ್ಷಗಳ ಮುಖಂಡರ ಮುಂದೆ ಮಂಡಿಯೂರಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ ಹಾಗೂ ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಮನವೊಲಿಕೆಗೆ ತಂದೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರನ್ನು ರಾಯಭಾರಿಯಾಗಿ ಕಳುಹಿಸಲು ಉದ್ದೇಶಿಸಿರುವ ಮಹೇಶ್, ಸಚಿವ ಎಚ್.ನಾಗೇಶ್ ಅವರ ಆಶೀರ್ವಾದ ಹಾಗೂ ಜಿಪಂ ಅಧ್ಯಕ್ಷರ ಸಹಾಯಕ್ಕೆ ಮೊರೆ ಹೋಗಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಹೇಶ್ ಪರ ನಿಲ್ಲುವರೇ ಎಂಬುದು ಕೂತುಹಲ ಮೂಡಿಸಿದೆ.

ಇನ್ನು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಲು ಕಾತುರರಾಗಿರುವ ಅರುಣ್ ಪ್ರಸಾದ್ ತಮ್ಮ ಬತ್ತಳಿಕೆಯಲ್ಲಿರುವ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಅಸಮಾಧಾನದ ಲಾಭ ಮಾಡಿಕೊಳ್ಳಲು ಜೆಡಿಎಸ್ ಹವಣಿಸುತ್ತಿದ್ದು, ಭಾನುವಾರ ಸಂಜೆ ನಡೆಯುವ ರಾಜಕೀಯ ವಿದ್ಯಮಾನಗಳ ಕಡೆ ಎಲ್ಲರ ಚಿತ್ತ ನೆಟ್ಟಿದೆ.

ಒಮ್ಮತ ಮೂಡದಿದ್ದರೆ ಚುನಾವಣೆ: ಜೂ.15ರಂದು ಬೆಳಗ್ಗೆ 12 ಗಂಟೆಯೊಳಗೆ ಸದಸ್ಯರಲ್ಲಿ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತವಾಗದಿದ್ದಲ್ಲಿ ಚುನಾವಣೆ ಅನಿವಾರ್ಯವಾಗಬಹುದು. ಜತೆಗೆ ಸಂಜೆ 4.30ಕ್ಕೆ ಮೂರು ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಆಗಬೇಕಿದ್ದು, ಜೂ.10ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ನೀಡಿರುವ ಸಲಹೆಯಂತೆ ತ್ರಿಪಕ್ಷ ಸೂತ್ರದಡಿ ಅಧಿಕಾರ ಹಂಚಿಕೆಗೆ ಒಮ್ಮತ ಮೂಡದಿದ್ದರೆ ಚುನಾವಣೆ ಬಿರುಸುಗೊಳ್ಳುವ ಸಾಧ್ಯತೆ ತಳ್ಳಿ ಹಾಕಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net