

ಕೋಲಾರ: ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಂಬಂಧ ಯಾವುದೋ ಗ್ರಾಪಂನ ಕ್ರಿಯಾಯೋಜನೆ ನಕಲು ಮಾಡುವ ಕೆಲಸಕ್ಕೆ ಹೋಗಬೇಡಿ, ನಿಮ್ಮ ಪಂಚಾಯಿತಿಗೆ ತಕ್ಕಂತೆ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಿ ಎಂದು ಜಿಪಂ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಅನುಷ್ಠಾನ ಸಂಬಂಧ ತಯಾರಿಸಿರುವ ಡಿಪಿಆರ್‌ಗಳನ್ನು ಪ್ರಸ್ತುತ ಪಡಿಸುವ ಸಭೆಯಲ್ಲಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ಎಲ್ಲರೂ ತ್ವರಿತವಾಗಿ ಕ್ರಿಯಾಯೋಜನೆ ಸಲ್ಲಿಸಬೇಕು ಎಂದರು.
ಪಿಡಿಒಗಳು ಗ್ರಾಪಂ ವ್ಯಾಪ್ತಿಗೆ ಒಳಗೊಂಡಂತೆ ಕ್ರಿಯಾಯೋಜನೆ ಸಿದ್ಧಪಡಿಸಿದರೆ ಸಮರ್ಪಕವಾಗಿ ಅನುದಾನ ನೀಡಲು ಸಾಧ್ಯವಾಗುತ್ತದೆ. ಅದು ಬಿಟ್ಟು ಬೇರೆ ಯಾವುದೋ ಗ್ರಾಪಂಗಳು ತಯಾರಿಸಿರುವ ಕ್ರಿಯಾಯೋಜನೆಯನ್ನು ನಕಲು ಮಾಡಿ ಅದರಲ್ಲಿ ನಿಮ್ಮ ಮಾಹಿತಿ ತುಂಬಿದರೆ ಪ್ರಯೋಜನವಿಲ್ಲ. ಈಗಾಗಲೆ ಅಂತಹ ನಾಲ್ಕೈದು ಕ್ರಿಯಾಯೋಜನೆಗಳು ಸಿಕ್ಕಿಬಿದ್ದಿವೆ. ಇನ್ನಾದರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಇದೀಗ ಜನಸಂಖ್ಯಾ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಶೌಚಗೃಹಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಈಗಾಗಲೆ ಬಯಲು ಬಹಿರ್ದೆಸೆಮುಕ್ತವಾಗಿದ್ದರೂ ಕೆಲ ಕುಟುಂಬಗಳು ಶೌಚಬಳಕೆಯಿಂದ ದೂರ ಉಳಿದಿವೆ. ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಜಗದೀಶ್ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯಾ ಭಾಗದಲ್ಲಿ ಮೊದಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಕ್ರಿಯಾಯೋಜನೆ ರೂಪಿಸುವಾಗ ಗ್ರಾಪಂನಲ್ಲಿ ಪ್ರತಿನಿತ್ಯ ಎಷ್ಟು ಕಸ ಸಂಗ್ರಹವಾಗುತ್ತದೆ ಎಂಬ ಮಾಹಿತಿ ಇರಲಿ. ಮೊದಲ ಹಂತದಲ್ಲಿ ಕಸದ ಬುಟ್ಟಿ ಹಾಗೂ ಕಸ ಸಾಗಿಸುವ ವಾಹನ ಖರೀದಿಸಬೇಕು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಗ್ರಾಪಂಗಳ ಸಮಗ್ರ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರೆಸಂಟೇಶನ್ ಮೂಲಕ ಒದಗಿಸಿದರು. ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ ಉಪಸ್ಥಿತರಿದ್ದರು.
ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹಸಿ ಕಸ ಸಂಗ್ರಹದಿಂದ ಗೋಬರ್‌ಗ್ಯಾಸ್ ತಯಾರಿಸಲು ಸಾಧ್ಯವಾಗುತ್ತದೆ ಈ ಎಲ್ಲ ಅಂಶ ಆಧರಿಸಿ ಘಟಕವನ್ನು ನಿರ್ವಹಣೆ ಮಾಡಬೇಕು. ಜಗದೀಶ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ