ಟ್ರೋಲ್ ಅರ್ಮಿ ವಿರುದ್ಧ ಟ್ರುತ್ ಆರ್ಮಿ ಬಳಕೆ: ಯೋಗೇಂದ್ರ ಯಾದವ್

udp-20-yogendra yadav
Published on

ಉಡುಪಿ: ಮೊಬೈಲ್ ನಲ್ಲಿ ವಾಟ್ಸಪ್ ನಂತಹ ಸಾಧನಗಳಿಂದ ಈ ದೇಶದಲ್ಲಿ ದ್ವೇಷ ಹಬ್ಬಿಸಲಾಗುತ್ತಿದೆ. ಆದುದರಿಂದ ದೇಶದಲ್ಲಿ ಸಂವಹನದ ಮುಖಾಂತರವೇ ದ್ವೇಷ ಅಳಿಸುವ ಕಾರ್ಯ ಮಾಡಬೇಕು. ಈ ಸುಳ್ಳಿನ ಸಾಮ್ರಾಜ್ಯ ಮುರಿಯಲು ಸಂವಹನ ಸಾಧನವನ್ನು ಉಪಯುಕ್ತ ರೀತಿಯಲ್ಲಿ ಬಳಸಬೇಕು. ಟ್ರೋಲ್ ಅರ್ಮಿಯ ವಿರುದ್ಧ ಟ್ರುತ್ (ಸತ್ಯದ) ಆರ್ಮಿ ಬಳಸಬೇಕಾಗಿದೆ ಎಂದು ನವದೆಹಲಿ ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ 'ದೇಶದ ಭವಿಷ್ಯ ಕ್ಕಾಗಿ ನಾವು' ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಬಿಜೆಪಿ ಆರ್ ಎಸ್‌ಎಸ್ ದ್ವೇಷ ರಾಜಕಾರಣದಲ್ಲಿ ಯಶಸ್ವಿಯಾಗಲು ನಮ್ಮ ವೈಫಲ್ಯ ಕೂಡ ಇದೆ. ನಾವು ಕಳೆದ 70 ವರ್ಷದಲ್ಲಿ ನಾವು ಮಾಡಿದ್ದೇನು ಎಂಬುವುದನ್ನು ಪ್ರಶ್ನಿಸಬೇಕು. ಆ ಕುರಿತು ಅವಲೋಕಿಸಬೇಕಾದ ಅಗತ್ಯವಿದೆ. ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ದೊಡ್ಡ ದೊಡ್ಡ ಜಾತ್ಯಾತೀತರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಇಲ್ಲಿನ ಜನರ ಭಾಷೆಯಲ್ಲಿ ಮಾತನಾಡಬೇಕಾಗಿದೆ‌. ನಮ್ಮ ದೊಡ್ಡ ಸಂಪತ್ತಾದ ರಾಷ್ಟ್ರೀಯವಾದವನ್ನು ಅವರಿಗೆ ಬಿಟ್ಟು ಕೊಟ್ಟೆವು. ಇವತ್ತು ಅವರು ನಮಗೆ ಅಂದೋಲನ ಜೀವಿಯೆಂದು ಹಂಗಿಸುತ್ತಾರೆ.ಸ್ವಾತಂತ್ರ್ಯಕ್ಕಾಗಿ ಮಡಿಯದ ಜನ ಇಂದು ಸ್ವಾತಂತ್ರ್ಯದ ಹಕ್ಕುದಾರರಾಗಿ ಮುಂದೆ ಬರುತ್ತಾರೆ. ಇದಕ್ಕೆ ನಾವೆ ಹೊಣೆಗಾರರಾಗಿದ್ದೇವೆ. ಮತ್ತೆ ನಾವು ಆ ರಾಷ್ಟ್ರೀಯವಾದವನ್ನು ವಾಪಸು ಪಡೆಯಬೇಕು. ನಾವು ಏನನ್ನು ಉದ್ವೇಗದಿಂದ ಮಾಡದೆ ಸಂಯಮದಿಂದ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ. ಈ ದೇಶವನ್ನು ಉಳಿಸುವ ಪ್ರಯತ್ನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ನಾವು ರಾಜಕೀಯವನ್ನು ನಿರ್ಲಕ್ಷ್ಯ ಮಾಡದೆ ಇದರ ಕಡೆ ಗಮನ ಹರಿಸಬೇಕು. ರಾಜಕೀಯದ ಕಡೆ ನಾವು ಹೆಜ್ಜೆ ಇಡದೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಇವತ್ತು ನಮ್ಮ ಮಕ್ಕಳ ಭವಿಷ್ಯ ರಾಜಕೀಯದಿಂದ ನಿರ್ಧಾರ ವಾಗುತ್ತಿದೆ. ಗೂಂಡಾಗಳು ರಾಜಕೀಯಕ್ಕೆ ಬರುತ್ತಿರುವ ಈ ಕಾಲಘಟ್ಟದಲ್ಲಿ ಒಳ್ಳೆಯ ಜನರು ಇದರತ್ತ ಮುಖ ಮಾಡಬೇಕು ಎಂದು ಅವರು ತಿಳಿಸಿದರು.

ಅಂಕಣಕಾರ, ಅಝೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ದ ಪ್ರಾಧ್ಯಾಪಕ ಎ.ನಾರಾಯಣ ಬೆಂಗಳೂರು ಮಾತನಾಡಿ, ದ್ವೇಷ ರಾಜಕಾರಣ ತಿರಸ್ಕರಿಸುವ ದೊಡ್ಡ ಜನ ಸಮೂಹ ಸೃಷ್ಟಿಯಾಗುವರೆಗೆ ಈ ವಾತಾವರಣ ಬದಲಾಯಿಸಲು ಸಾಧ್ಯವಾಗುದಿಲ್ಲ. ಆದರೆ ನಾವು ಸಂವಿಧಾನದ ಆಶಯ ತಿಳಿಸುವಲ್ಲಿ ಸೋತಿದ್ದೇವೆ. ಈ ದೇಶ ದೇಶವಾಗಿ ಉಳಿಯಲು ಸಂವಿಧಾನದ ಪ್ರಾಧಾನ್ಯತೆಯನ್ನು ಜನರುಗೆ ತಿಳಿಸಬೇಕಾಗಿದೆ. ಇಲ್ಲದಿದ್ದರೆ ಅವರು ಹೇಳುವ ವಿಚಾರದಲ್ಲಿ ಈ ದೇಶ ಉಳಿಯುವುದಿಲ್ಲ ಎಂದರು.

ಎದ್ದೇಳು ಕರ್ನಾಟಕ ಸಂಯೋಜನಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಸಮಾರೋಪ ಭಾಷಣ ಮಾಡಿದರು. ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಸಂಸ ಮುಖಂಡರಾದ ಮಂಜುನಾಥ್ ಗಿಳಿಯಾರ್, ಹಿರಿಯ ಚಿಂತಕ ಪ್ರೊ.ಫಣಿರಾಜ್, ಫಾ.ವಿಲಿಯಂ ಮಾರ್ಟಿಸ್, ಲೂವಿಸ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಸಯ್ಯದ್ ಫರೀದ್ ವಂದಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net