ಜಿಹಾದಿ ಶಕ್ತಿಗಳ ಕುತಂತ್ರ ಅರಿವು ಅಗತ್ಯ: ಸಚಿವ ಸುನೀಲ್

udp-sunilkumar
Published on

ಡುಪಿ: ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಜಿಹಾದ್ ಹಿಂಸಾಚಾರ ಇಂದು ದೇಶವ್ಯಾಪಿಯಾಗಿದೆ. ಇದು ಕೇವಲ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜಸ್ಥಾನ, ಪಂ.ಬಂಗಾಳ, ಕೇರಳದ ಜೊತೆಗೆ ಕರ್ನಾಟಕಕ್ಕೂ ವಿಸ್ತರಿಸಿದೆ. ಜನರು ಜಿಹಾದಿಗಳ ಕುತಂತ್ರ ಅರಿಯಬೇಕು. ಮತೀಯ ಶಕ್ತಿಗಳ ಯೋಚನೆಗಳನ್ನು ಸಮಾಜದ ಮುಂದೆ ಇಡುತ್ತೇವೆ. ಜನಜಾಗೃತಿ ಮೂಡಿಸುತ್ತೇವೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಸೋಮವಾರ ಮಣಿಪಾಲದ ರಜತಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಹಾದ್ ಹಿಂಸಾಚಾರದ ಬಗ್ಗೆ ಮುಸ್ಲಿಂ ಸಮುದಾಯ ಆಲೋಚನೆ ಮಾಡಬೇಕು. ಮುಸ್ಲಿಂ ರಾಷ್ಟ್ರಗಳೇ ದೊಡ್ಡ ಪ್ರಮಾಣದಲ್ಲಿ ಇದರಿಂದ ವಿಮುಖರಾಗುತ್ತಿದ್ದಾರೆ. ವೈಚಾರಿಕತೆ ಚರ್ಚೆ ಮೂಲಕ ನಡೆಯಬೇಕು. ಭಾರತದಲ್ಲಿ ಹಿಂಸಾಚಾರದ ಮೂಲಕವೇ ವಿಚಾರ ಹರಡುತ್ತೇವೆ ಎಂದರೆ ನಾಗರಿಕ ಸಮಾಜ ಒಪ್ಪುವುದಿಲ್ಲ. ಅಹಿತಕರ ಘಟನೆಗಳಿಗೆ ಪ್ರಯತ್ನ ಮಾಡಿದರೆ ಅಂಥವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ಜಿಹಾದಿ ಶಕ್ತಿಗಳ ವಿರುದ್ಧ ಸಮಾಜ ಒಂದಾಗಬೇಕು ಎಂದು ಕರೆ ನೀಡಿದರು.

ಪೊಲೀಸರಿಗೆ ಮುಕ್ತ ಅವಕಾಶ
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಸುಳಿವು ಲಭಿಸಿದೆ. ತನಿಖೆಯಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಎಡಿಜಿಪಿ ಮಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಧಿಕಾರಿಗಳು ಪ್ರವೀಣ್ ಕೊಲೆಗೆ ಹಣಕಾಸು ನೆರವು ನೀಡಿದವರು, ನಿಜವಾದ ಕೊಲೆಗಾರರನ್ನು ಪತ್ತೆ ಮಾಡಲಿದ್ದಾರೆ ಎಂದರು.

ಕಾರ್ಯಕರ್ತರ ಕೋಪ ಸಹಜ
ಕಾರ್ಯಕರ್ತರ ಕೋಪವನ್ನು ಯಾವತ್ತು ಸರಿಯಲ್ಲ ಎನ್ನುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ಅಪಸ್ವರ ಇರುತ್ತದೆ. ತಂದೆ ಮಗನಿಗೆ, ಮಗ ತಂದೆಗೆ ಬುದ್ಧಿ ಹೇಳಲೇಬೇಕು. ಅದನ್ನು ಭಿನ್ನಾಭಿಪ್ರಾಯ ಎನ್ನಲು ಸಾಧ್ಯವಿಲ್ಲ. ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನೋದು ಸರಿಯಾಗಿದೆ. ಅವರ ಅಭಿಪ್ರಾಯವನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ಪಕ್ಷದಲ್ಲಿ ಆ ರೀತಿ ಬದ್ಧತೆ ಇದೆ. ಆಕ್ರೋಶ ಪ್ರತಿರೋಧ ಬಂದಿದೆ ಎಂಬ ಕಾರಣಕ್ಕೆ ರಾಷ್ಟ್ರೀಯತೆಯಿಂದ ವಿಮುಖರಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net