ಯುವಕರ ತಂಡದಿಂದ ಜಿಗಣಿ ಕೆರೆ ಪುನಶ್ಚೇತನ, ನಾಲ್ಕು ದಿನಗಳಿಂದ ಸ್ವಚ್ಛತಾ ಕಾರ್ಯ, ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ವಿಶ್ವನಾಥ್ ಸಾಥ್

01ank news and photos 06..
Published on

ನವೀನ್ ಚಂದ್ರ ಶೆಟ್ಟಿ ಆನೇಕಲ್

ಮಲಿನಗೊಂಡಿದ್ದ ಜಿಗಣಿ ಕೆರೆ ಪುನಶ್ಚೇತನಕ್ಕೆ ಸ್ಥಳೀಯ ಯುವಕರು ಹಾಗೂ ಪೊಲೀಸರು ಮುಂದಾಗಿದ್ದಾರೆ.

480 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಗಿಡ-ಗಂಟಿ ಬೆಳೆದಿದ್ದು, ಕೈಗಾರಿಕೆಗಳ ತ್ಯಾಜ್ಯ ಹಾಗೂ ಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಕೆರೆ ಮೂಲರೂಪವನ್ನೇ ಕಳೆದುಕೊಂಡಿದೆ. ಸತತ ಮಳೆಯಿಂದ ವಾರದ ಹಿಂದೆ ಕೆರೆ ತುಂಬಿ ಕೋಡಿ ಹರಿದಿದ್ದು, ಕೆರೆಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಜಿಗಣಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್ ಹಾಗೂ ಸ್ಥಳೀಯ ಯುವಕರ ತಂಡ ಕೆರೆಯಲ್ಲಿರುವ ಗಿಡ-ಗಂಟಿ ತೆಗೆದು ಸ್ವಚ್ಛಗೊಳಿಸಲು ಮುಂದಾಗಿದೆ.

ನಾಲ್ಕು ದಿನಗಳಿಂದ ನಿರಂತರವಾಗಿ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದು, ತೆಪ್ಪಗಳ ಮೂಲಕ ಕೆರೆಯಲ್ಲಿರುವ ಗಿಡಗಳನ್ನು ಅಂಚಿಗೆ ಎಳೆದು ಜೆಸಿಬಿ ಮೂಲಕ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ.

ಕರೊನಾ ಸಂದರ್ಭದಲ್ಲಿ ನೂರಾರು ಯುವಕರು ತಂಡ ಕಟ್ಟಿಕೊಂಡು ಬಡಜನರ ಸೇವೆಯನ್ನು ಇನ್‌ಸ್ಪೆಕ್ಟರ್ ವಿಶ್ವನಾಥ್ ಮಾಡಿದ್ದರು. ಇದೇ ತಂಡ ಈಗ ಕೆರೆ ಸ್ವಚ್ಛತೆಗೆ ಕೈ ಹಾಕಿದೆ. ಪ್ರತಿದಿನ ಕನಿಷ್ಠ 100 ಯುವಕರು ಕೆಲಸ ಮಾಡಿದರೂ ಎರಡು ತಿಂಗಳು ಬೇಕಾಗಬಹುದು. ಸ್ವಚ್ಛತೆ ನಂತರ ಜಿಗಣಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಗಳ ಸಹಕಾರ ಪಡೆದು ಕೆರೆಗೆ ಹೊಸ ರೂಪ ನೀಡಲು ಯುವಕರು ಚಿಂತನೆ ನಡೆಸಿದ್ದಾರೆ.

ಕೆರೆ ಅಭಿವೃದ್ಧಿಗೆ ಸಹಕಾರ ಜಿಗಣಿ ಕೆರೆ ಸ್ವಚ್ಛತೆಗೆ ಯುವಕರ ತಂಡದ ಗಿರೀಶ್, ಪ್ರವೀಣ್, ಕೀರ್ತಿರಾಜ್, ಸುಪ್ರಿತ್‌ಗೌಡ ಜತೆಗೆ ನೂರಾರು ಗ್ರಾಮಸ್ಥರು ಕೈಜೋಡಿಸಿದ್ದಾರೆ. ಕೆರೆಗೆ ಮರುಜೀವ ನೀಡುವ ಕಾರ್ಯಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಬೆಂ.ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಭರವಸೆ ನೀಡಿದ್ದಾರೆ.

ಒಂದು ಕಾಲದಲ್ಲಿ ಜಿಗಣಿ ಗ್ರಾಮಸ್ಥರು ಇದೇ ಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಕೈಗಾರಿಕಾ ಪ್ರದೇಶದ ಕೊಳಚೆ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಕೆರೆ ಮಲಿನವಾಗಿದೆ. ಕೆರೆ ಪುನರುಜ್ಜೀವನಗೊಳಿಸಲು ಸರ್ಕಾರ ಮುಂದಾಗಬೇಕು. ಮೆಡಿಕಲ್ ಬಾಬು, ಸ್ವಚ್ಛತೆಯಲ್ಲಿ ಪಾಲ್ಗೊಂಡ ಸ್ಥಳೀಯ ಈಗಾಗಲೆ ನಾಲ್ಕು ದಿನಗಳಿಂದ ನಾವೇ ಕೆರೆ ಸ್ವಚ್ಛತೆ ಮಾಡುತ್ತಿದ್ದೇವೆ. ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕನಿಷ್ಠ ಎರಡು ತಿಂಗಳಾದರೂ ಬೇಕು. ಕೆರೆ ಸ್ವಚ್ಛ ಆಗುವವರೆಗೆ ಯಾವುದೇ ಕಾರಣಕ್ಕೂ ಪ್ರಯತ್ನ ಕೈಬಿಡುವುದಿಲ್ಲ. ಗಿರೀಶ್, ಯುವಕರ ತಂಡದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net