

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಅ. 20ರಂದು ಬೆಳಗ್ಗೆ 10 ಗಂಟೆಗೆ ವಿಮರ್ಶಕ ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಪ್ರೊ. ರಾಘವೇಂದ್ರ ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಚ್.ಎಸ್. ರಾಘವೇಂದ್ರರಾವ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ರಮಾಕಾಂತ ಜೋಶಿ ಅವರು ಜಿ.ಎಂ. ಹೆಗಡೆ ಸಂಪಾದಕತ್ವದ "ಒಳಗಿರುವ ಬೆಳಕು' ಕೃತಿ ಬಿಡುಗಡೆ ಮಾಡುವರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಜಿ.ಎಂ ಹೆಗಡೆ ಉಪಸ್ಥಿತರಿರುವರು ಎಂದರು.
ನಂತರ 11 ಗಂಟೆಗೆ ಪ್ರಬಂಧ ಮಂಡನೆ ನಡೆಯಲಿದ್ದು, ಡಾ. ಜಿ.ಎಸ್. ಆಮೂರ ಸೃಜನಶೀಲ ಬರಹಗಳು ಕುರಿತು ಎಸ್.ಆರ್. ವಿಜಯಶಂಕರ, ಅನುವಾದದ ಸಿದ್ಧಾಂತ ಮತ್ತು ಅನುಸರಣೆ ಕುರಿತು ಡಾ. ಎನ್.ಎಸ್. ಗುಂಡೂರ ಮಾತನಾಡುವರು. ಪ್ರೊ. ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಡೆಯುವ ಸಂವಾದದಲ್ಲಿ ವಿಮರ್ಶಕ ರಾಜೇಂದ್ರ ಚೆನ್ನಿ, ಎಂ.ಎಸ್. ಆಶಾದೇವಿ, ಎಂ.ಜಿ.ಹೆಗಡೆ ಭಾಗವಹಿಸುವರು. ಶ್ರೀಧರ ಹೆಗಡೆ ಭದ್ರನ್ ನಿರ್ವಹಣೆ ಮಾಡುವರು. ಮಧ್ಯಾಹ್ನ 1.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀರಾಮ ಭಟ್ಟ ಸಮಾರೋಪ ಭಾಷಣ ಮಾಡುವರು ಎಂದರು.
ಮುಂದಿನ ಒಂದು ವರ್ಷ ಕಾಲ ವಿವಿಧ ಜಿಲ್ಲೆಗಳಲ್ಲಿ ಶತಮಾನೋತ್ಸವ ಸಮಾರಂಭ ನಡೆಸುವ ಚಿಂತನೆ ಇದೆ ಎಂದರು.
ಶ್ರೀನಿವಾಸ ವಾಡಪ್ಪಿ, ಲೋಹಿತ ನಾಯ್ಕರ, ಹ.ವೆಂ. ಕಾಖಂಡಿಕಿ, ಸಮೀರ ಜೋಶಿ, ಇತರರು ಇದ್ದರು.