ಮಗು ದತ್ತು ಪಡೆದ ಮುಂಬೈ ಮಹಿಳೆ; ಕಾನೂನಾತ್ಮಕವಾಗಿ ಮಗು ಹಸ್ತಾಂತರಿಸಿದ ಡಿಸಿ

7 HVR 8
Published on

ಹಾವೇರಿ: ದತ್ತು ಪೂರ್ವ ಪೋಷಕತ್ವ ಕಾರ್ಯಕ್ರಮದಡಿ ನಗರದ ಸ್ಪಂದನ ದತ್ತು ಕೇಂದ್ರದ ಎರಡು ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರ ರಾಜ್ಯದ ಮುಂಬೈ ಮೂಲದ ಏಕ ಪೋಷಕರಿಗೆ ಕಾನೂನಿನ ಪ್ರಕಾರ ದತ್ತು ನೀಡಲಾಯಿತು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಮಗುವನ್ನು ಕಾನೂನಾತ್ಮಕವಾಗಿ ಪೋಷಕರಿಗೆ ಹಸ್ತಾಂತರಿಸಿದರು. ಮುಂಬೈ ಮೂಲದ ಕಾಲೇಜೊಂದರ ಸಹ ಪ್ರಾಂಶುಪಾಲೆ ಹಾಗೂ ಲೇಖಕಿ ಮಗುವನ್ನು ದತ್ತು ಪಡೆದರು.
ಉಪವಿಭಾಗಾಧಿಕಾರಿಗಳಾದ ಎಚ್.ಬಿ.ಚನ್ನಪ್ಪ ಹಾಗೂ ಮಹ್ಮದ್ ಖಿಜರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಎಸ್.ಎಚ್.ಮಜೀದ್, ಇತರರು ಉಪಸ್ಥಿತರಿದ್ದರು.
ಶಿವಮೊಗ್ಗದ ಮೂಲದ ಮಗು
ಯಾವುದೋ ಒಂದು ಕಾರಣದಿಂದ ಮಗು ಬೇಡ ಎಂದು ಶಿವಮೊಗ್ಗ ಮೂಲದ ಪಾಲಕರು ಶಿವಮೊಗ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲೂೃಸಿ)ಗೆ ಒಪ್ಪಿಸಿದ್ದರು. ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಯಾಗಿ ದತ್ತು ಮಗು ಆದೇಶದೊಂದಿಗೆ ಹಾವೇರಿ ಸಿಡಬ್ಲೂೃಸಿಗೆ ವರ್ಗಾವಣೆ ಮಾಡಲಾಗಿತ್ತು. ದತ್ತು ಪೂರ್ವ ಪೋಷಕತ್ವ ಯೋಜನೆಯಡಿ ಮಗುವನ್ನು ದತ್ತು ನೀಡಲಾಗಿದೆ ಎಂದು ಪತ್ರಿಕೆಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net