ಪ್ರತ್ಯೇಕ ಪ್ರಕರಣದಲ್ಲಿ ಚಿನ್ನಾಭರಣ, ಹಣ ಕಳವು

Published on

ಕುದೂರು: ಇಲ್ಲಿನ ಪೊಲೀಸ್​ ಠಾಣೆ ವ್ಯಾಪ್ತಿಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಚಿನ್ನಾಭರಣ, ನಗದು ಹಾಗೂ ಗೃಹೋಪಯೋಗಿ ವಸ್ತುಗಳನ್ನು ದೋಚಿದ್ದಾರೆ.

ಸೋಲೂರಿನ ಅಂಬೇಡ್ಕರ್​ ನಗರ ನಿವಾಸಿ, ಲಕ್ಕೇನಹಳ್ಳಿ ಗ್ರಾಪಂನ ಕರವಸೂಲಿಗಾರ ನಾರಾಯಣಸ್ವಾಮಿ ಅವರು ಬುಧವಾರ ಸಂಬಂಧಿಕರ ಗೃಹಪ್ರವೇಶಕ್ಕೆ ಹೋಗಿದ್ದಾಗ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿನ 87 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ನಗದು ದೋಚಿದ್ದಾರೆ. ನಾರಾಯಣಸ್ವಾಮಿ ಅವರು ಮಗಳ ಮದುವೆಗೆಂದು 1.5 ಲ ನಗದು, 12 ಗ್ರಾಂ ತೂಕದ 3 ಜೊತೆ ಓಲೆ, 15 ಗ್ರಾಂ ತೂಕದ 2 ಉಂಗುರ, 60 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಜತೆ ಕಾಲು ಚೈನುಗಳನ್ನು ಕಳ್ಳರು ದೋಚಿದ್ದಾರೆ ಎಂದು ಕುದೂರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ಸೋಲೂರು ಹೋಬಳಿಯ ಎಣ್ಣೆಗೆರೆ ಗ್ರಾಮದ ಫಾಮ್​ರ್ ಹೌಸ್​ ಬೀಗ ಒಡೆದು ಒಳನುಗ್ಗಿದ ಕಳ್ಳರು ಹೌಸ್​ನಲ್ಲಿನ ಟಿವಿ, ಸಿಲಿಂಡರ್​, ಮಿಕ್ಸಿ, ಕುಕ್ಕರ್​ ಸೇರಿ ಮತ್ತಿತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಬೆಂಗಳೂರಿನ ಮಹಾಲಕ್ಷಿ$್ಮ ಲೇಔಟ್​ನಲ್ಲಿ ನೆಲೆಸಿರುವ ಮನೋವಿರ್​ ಅವರು ಎಣ್ಣೆಗೆರೆಯ ಜಮೀನನ್ನು ನೋಡಿಕೊಳ್ಳಲು ಅದೇ ಗ್ರಾಮದ ಇಬ್ಬರನ್ನು ನೇಮಿಸಿಕೊಂಡಿದ್ದರು. ಇಬ್ಬರು ಮಹಿಳೆಯರು ಮತ್ತು ಒಬ್ಬ ಗಂಡಸು ಕೈಯಲ್ಲಿ ಮಚ್ಚು ಹಿಡಿದುಕೊಂಡು ಓಡಾಡಿರುವ, ಕಳ್ಳತನ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಲೀಕ ಮನೋವೀರ್​ ಅವರು ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಕ್ಕಿಯಲ್ಲಿದ್ದ 1.5 ಲಕ್ಷ ರೂ. ಮಾಯ ಇಲ್ಲಿನ ಬಸ್​ ನಿಲ್ದಾಣದ ಸಮೀಪ ಸ್ಕೂಟಿ ಡಿಕ್ಕಿಯಲ್ಲಿಟ್ಟದ್ದ 1.5 ಲಕ್ಷ ರೂಪಾಯಿಯನ್ನು ಖದೀಮರು ದೋಚಿದ್ದಾರೆ. ಪಟ್ಟಣದ ಜನತಾನಗರ ನಿವಾಸಿ ಶಿವಕುಮಾರ್​ ಅವರು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬುಧವಾರ ಬೆಳಗ್ಗೆ ಬ್ಯಾಂಕ್​ನಿಂದ ಹಣ ಡ್ರಾ ಮಾಡಿ ಸ್ಕೂಟಿಯ ಡಿಕ್ಕಿಯಲ್ಲಿಟ್ಟು, ಕೀಯನ್ನೂ ಬೈಕಿನಲ್ಲೇ ಬಿಟ್ಟು ಜುವೆಲ್ಲರ್​ ಅಂಗಡಿಗೆ ತೆರಳಿದ್ದರು. ಇದೇ ವೇಳೆ ಕಳ್ಳರು ಡಿಕ್ಕಿ ತೆಗೆದು ಹಣ ದೋಚಿದ್ದು, ಚಿನ್ನಾಭರಣ ಅಂಗಡಿಯಿಂದ ಶಿವಕುಮಾರ್​ ಮರಳಿ ಬಂದು ಡಿಕ್ಕಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧಿಸಿದಂತೆ ಶಿವಕುಮಾರ್​ ಅವರು ಕುದೂರು ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net