

ಬೆಳಗಾವಿ: ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು, ಕಾನೂನು ಮಾಪನ ಇಲಾಖೆ ಜಿಲ್ಲಾ ಸಹಾಯಕ ನಿಯಂತ್ರಕ ಸುಭಾಷ ಉಪ್ಪಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಹಾಗೂ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವರು ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಡಿ.ಎಸ್.ನೇಮಗೌಡ ನೇತೃತ್ವದಲ್ಲಿ 40 ಅಧಿಕಾರಿಗಳ ನಾಲ್ಕು ತಂಡಗಳು ದಾಳಿ ನಡೆಸಿದ್ದವು.
ಬೆಳಗಾವಿಯ ರುಕ್ಮಿಣಿ ನಗರದಲ್ಲಿರುವ ಮನೆ, ಬೆಳಗಾವಿಯಲ್ಲಿನ ಕಚೇರಿ, ಹುಟ್ಟೂರು ಬೆಳಗಾವಿ ತಾಲೂಕಿನ ಬಸವನ ಕುಡಚಿ ಗ್ರಾಮದ ಮನೆ, ಅಳಿಯನ ಮನೆ ಹಾಗೂ ಬಾಡಿಗೆ ಮನೆ ಸೇರಿ ಒಟ್ಟು ನಾಲ್ಕು ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ಕು ಕಡೆಯೂ ಚಿನ್ನಾಭರಣ, ನಗದು ಸೇರಿ ಮಹತ್ವದ ದಾಖಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಿ.ಎಸ್.ನೇಮಗೌಡ ತಿಳಿಸಿದ್ದಾರೆ.
ಬ್ಯಾಂಕ್ ಬ್ಯಾಲೆನ್ಸ್ 51 ಲಕ್ಷ ರೂ.: ಉಪ್ಪಾರ್ ಅವರು ವಿವಿಧ ಬ್ಯಾಂಕ್‌ಗಳಲ್ಲಿ 51,51,672 ಬ್ಯಾಲೆನ್ಸ್, 5 ಲಕ್ಷ ರೂ. ಮೊತ್ತದ ಎಲ್‌ಐಸಿ ಪಾಲಿಸಿಗಳು, 337 ಗ್ರಾಂ ಬಂಗಾರದ ಆಭರಣ, 1511 ಗ್ರಾಂ ಬೆಳ್ಳಿಯ ವಸ್ತು ಹೊಂದಿದ್ದಾರೆ. ಬೆಳಗಾವಿ ರುಕ್ಮಿಣಿ ನಗರದಲ್ಲಿ 2720 ಚ.ಅ. ನಿವೇಶನ, ಭವ್ಯವಾದ ಆರ್‌ಸಿಸಿ ಡ್ಯೂಪ್ಲೆಕ್ಸ್ ಬಂಗ್ಲೆ, ಎಚ್.ಡಿ.ಕುಮಾರಸ್ವಾಮಿ ಬಡಾವಣೆಯಲ್ಲಿ ಒಂದು ನಿವೇಶನ ಹೊಂದಿದ್ದಾರೆ. ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಕುರಿತು ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಡಿ.ಎಸ್. ನೇಮಗೌಡ ತಿಳಿಸಿದ್ದಾರೆ.