ವಿನೂತನ ಆಭರಣ ಪ್ರದರ್ಶನ ಮಾರಾಟ, ಹುಬ್ಬಳ್ಳಿಯಲ್ಲಿ ಮೂರು ದಿನ ಮೇಳ

Published on

ಹುಬ್ಬಳ್ಳಿ: ಬೆಂಗಳೂರಿನ ಗೋಲ್ಡನ್ ಕ್ರೀಪರ್ ಸಂಸ್ಥೆಯ ಸಹಯೋಗದಲ್ಲಿ 30ಕ್ಕೂ ಹೆಚ್ಚು ಅಗ್ರ ಶ್ರೇಣಿಯ ಆಭರಣ ತಯಾರಕರಿಂದ ವಿನೂತನ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಸೆ. 13ರಿಂದ ಮೂರು ದಿನಗಳ ವರೆಗೆ ಆಯೋಜಿಸಲಾಗಿದೆ.

"ದ ಜುವೇಲರಿ ಶೋ' ಹೆಸರಿನ ಭಾರತೀಯ ಒಡವೆಗಳ ಉತ್ಸವದಲ್ಲಿ 30 ಸಾವಿರಕ್ಕೂ ಅಧಿಕ ಡಿಸೈನ್ ಗಳುಳ್ಳ ಆಭರಣಗಳು ನೋಡಲು ಹಾಗೂ ಕೊಳ್ಳಲು ಸಿಗಲಿವೆ. ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್. ಮತ್ತು ಹೇಮಲತಾ ಜಗದೀಶ್ ಅವರು ಆಯೋಜಿಸಿರುವ ಆಭರಣ ಮೇಳವನ್ನು ಸೆ. 13ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಾಗುವುದು.

ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು, ನಂಬಿಕಸ್ತ ಹೂಡಿಕೆಯೂ ಆಗಿದೆ. ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆದಾರರು ಭಾಗವಹಿಸುತ್ತಿದ್ದು, ಮುಂಬರುವ ಮದುವೆ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಉತ್ತಮ ವೇದಿಕೆಯಾಗಿದೆ.

ಭಾರತದ ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳು ಇಲ್ಲಿ ದೊರೆಯಲಿದ್ದು, ವಿಶೇಷ ವಿನ್ಯಾಸಗಳನ್ನೊಳಗೊಂಡ ಬಿಐಎಸ್ ಹಾಲ್ ಮಾರ್ಕ್ ಆಭರಣಗಳು ಇಲ್ಲಿವೆ.

ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ/ ಐಜಿಐ ಪ್ರಮಾಣಿತ ಆಭರಣಗಳ ಬಗ್ಗೆ ಉಚಿತ ಮಾಹಿತಿಯೂ ಇಲ್ಲಿ ಲಭ್ಯ. ಜತೆಗೆ ಖರೀದಿದಾರರು ಹಳೇ ಚಿನ್ನ ಬದಲಾಯಿಸಿಕ್ಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರಿನ ಅನನ್ಯ ಜುವೆಲ್ಸ್, ಬಿಎನ್ಆರ್ ಗೋಲ್ಡ್, ದವನಂ, ಗಜರಾಜ್, ನವರತನ್, ಪಿಎಂಜೆ, ಸಿಂಹ ಜುವೆಲರ್ಸ್, ಶ್ರೀಗಣೇಶ ಡೈಮೆಂಡ್ಸ್, ಆರ್ಟ ಇಂಡಿಯಾ, ವಂಡರ್ ಡೈಮೆಂಡ್ಸ್, ನೈನ್ ಜುವೆಲ್ಸ್, ಬೆಳಗಾವಿಯ ಪೋತದಾರ್ ಬ್ರದರ್ಸ್, ಭಗವಾನ್ಶೇಟ್ಜೀ, ರೂಪಂ ಸಿಲ್ವರ್, ಸಿಲ್ವರ್ ಗ್ಯಾಲರಿ, ಸ್ಯಾಂಚೀಸ್, ಮೈ ಸಿಲ್ವರ್, ಪ್ಯಾಷನ್ ಜುವೆಲರಿ, ಸ್ರಸ್ವ, ನಿತ್ಯಾಸ್ (ವಿಶಾಖಪಟ್ಟಣಂ), ಅರ್ಹಮ್(ಕೋಲ್ಕತ), ಬಾಲಾಜಿ ಪರ್ಲ್ಸ(ಚೆನೆ) ಮುಂತಾದ ಆಭರಣ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ.

ಪ್ರದರ್ಶನ 3 ದಿನ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net