ಜೆಟ್ಟಿ ಪುನಃ ನಿರ್ಮಾಣ ಮೀನಮೇಷ

je
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ಪುನಃ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡು ಮೂರು ವರ್ಷ ಕಳೆದಿದ್ದು, ಮೀನುಗಾರರು ಹಿಡಿಶಾಪ ಹಾಕಲಾರಂಭಿಸಿದ್ದಾರೆ.

ಸುಮಾರು 50 ಮೀಟರ್ ಉದ್ದಕ್ಕೆ ಹಳೇ ಜೆಟ್ಟಿ ಕಾಂಕ್ರೀಟ್ ಸ್ಲಾೃಬ್ ಹಾಗೂ ಡಯಾ-ಫ್ರಾಮ್ ವಾಲ್ ಕುಸಿದುಬಿದ್ದು ಹೊಸ ಜೆಟ್ಟಿ ನಿರ್ಮಾಣಕ್ಕೆ ಅಳವಡಿಸಲಾಗಿದ್ದ ಪಿಲ್ಲರ್ ಹಾಗೂ ಇನ್ನಿತರ ಕಾಂಕ್ರೀಟ್ ಕಾಮಗಾರಿಗೆ ಹಾನಿಯಾಗಿದೆ. ಹೊಸದಾಗಿ ಹಾಕಿದ ಪಿಲ್ಲರ್ ವಾಲಿಕೊಂಡಿದೆ. ಹೊಸ ಜೆಟ್ಟಿ ಮತ್ತೆ ಹೊಸ ವಿನ್ಯಾಸದಲ್ಲಿ ತಯಾರಿಸಲು ಮೀನುಗಾರಿಕಾ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ಮೀನುಗಾರ ವಲಯದಲ್ಲಿ ಕೇಳಿಬಂದಿದೆ.

 ಕಾಮಗಾರಿ ಪುನರಾರಂಭ ಸೂಚನೆ

ತಿಂಗಳ ಹಿಂದೆ ಜೆಟ್ಟಿ ಪುನಃ ನಿರ್ಮಾಣ ಗುತ್ತಿಗೆ ವಹಿಸಿಕೊಂಡ ಕಂಪನಿ ಕುಸಿದು ಬಿದ್ದ ಹಳೇ ಜೆಟ್ಟಿ ಕಾಂಕ್ರೀಟ್ ಸ್ಲಾೃಬ್ ಹಾಗೂ ಡಯಾ-ಫ್ರಾಮ್ ವಾಲ್‌ನ್ನು ನೀರಿನಿಂದ ತೆರವುಗೊಳಿಸಿ, ಕಾಮಗಾರಿ ಪುನರಾರಂಭದ ಸೂಚನೆ ನೀಡಿತ್ತು. ತೆರವು ಕಾರ್ಯಾಚರಣೆ ಮುಗಿದ ಕೆಲವೇ ದಿನಗಳಲ್ಲಿ ಮತ್ತೆ ಕಾಮಗಾರಿ ಸ್ಥಗಿತಗೊಳಿಸಿದೆ. ಸ್ಥಗಿತಗೊಂಡು ಸುಮಾರು ಒಂದು ತಿಂಗಳು ಕಳೆದಿದ್ದು, ಮಳೆಗಾಲದ ಒಳಗೆ ಕಾಮಗಾರಿ ಪುನರಾರಂಭವಾಗುವ ಯಾವುದೇ ಸೂಚನೆ ಇಲ್ಲದೆ ಮೀನುಗಾರರು ಕಂಗಾಲಾಗಿದ್ದಾರೆ. ಮೂರು ವರ್ಷದಿಂದ ಬೋಟ್ ಮತ್ತು ದೋಣಿ ನಿಲ್ಲಿಸಲು ಸ್ಥಳಾವಕಾಶ ಕೊರತೆ ಎದುರಾಗಿದ್ದರೆ, ಮೀನುಗಾರರು ಹಾಗೂ ಮೀನುಗಾರ ಕಾರ್ಮಿಕರು ಸುಡುಬಿಸಿಲಿನಲ್ಲಿ ಮೀನುಗಾರಿಕಾ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ.

ಜೆಟ್ಟಿ ಕೊರತೆ

ಕಿರು ಬಂದರಿನ ಮೂಲ ಜೆಟ್ಟಿ 405 ಮೀ. ಉದ್ದದಷ್ಟಿದ್ದು, ಹಳೇ ಜೆಟ್ಟಿ ಸಂಪೂರ್ಣ ಕಿತ್ತು ನೂತನ ಜೆಟ್ಟಿ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು. ಈಗಾಗಲೇ 210 ಮೀ. ಉದ್ದದ ಜೆಟ್ಟಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಟ್ಟು 379 ಮೀ. ಉದ್ದದ ಜೆಟ್ಟಿ ನಿರ್ಮಾಣವಾಗಬೇಕಿದೆ. ಇನ್ನುಳಿದ ಸುಮಾರು 170 ಮೀಟರ್ ಉದ್ದದ ಜೆಟ್ಟಿ ಪುನಃ ನಿರ್ಮಾಣ ನಡೆಯಬೇಕಿದೆ. ಗಂಗೊಳ್ಳಿಯಲ್ಲಿ 50 ಪರ್ಸಿನ್ ಬೋಟ್, 150 ನಾಡದೋಣಿಗಳು, 250 ಟ್ರಾಲ್‌ಬೋಟ್, 100 ರಷ್ಟು 370 ಬೋಟ್‌ಗಳು, 100ಕ್ಕಿಂತ ಹೆಚ್ಚು ಕಂಟ್ಲಿ ದೋಣಿಗಳಿವೆ. ಈಗ ಇರುವ ಜೆಟ್ಟಿ ಏನೇನೂ ಸಾಲುವುದಿಲ್ಲ.

ಪರಿಹಾರ ಶೂನ್ಯ

ರಾಜ್ಯದ ಮೀನುಗಾರಿಕೆ ಇಲಾಖೆ ಸಚಿವರು, ಸ್ಥಳೀಯ ಶಾಸಕರು ಭೇಟಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರೂ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರ ಗಂಗೊಳ್ಳಿ ಬಂದರನ್ನು ನಿರ್ಲಕ್ಷೃ ಮಾಡುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜೆಟ್ಟಿ ಪುನಃ ನಿರ್ಮಾಣ ಕಾರ್ಯ ಪೂರ್ಣಗೊಂಡು ಮೀನುಗಾರರ ಉಪಯೋಗಕ್ಕೆ ಸಿಗುವುದು ಯಾವಾಗ ಎಂಬುದು ಯಕ್ಷ ಪ್ರಶ್ನೆ.

ಕುಸಿದು ಬಿದ್ದಿರುವ ಗಂಗೊಳ್ಳಿ ಬಂದರಿನ ಹಳೇ ಜೆಟ್ಟಿ ಹೊಸ ವಿನ್ಯಾಸದೊಂದಿಗೆ ಪುನಃ ನಿರ್ಮಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನ ಸಿಐಸಿಎಫ್ ಸಂಸ್ಥೆ ಸಲಹೆ ಪಡೆದುಕೊಂಡು ಹೊಸ ವಿನ್ಯಾಸದಲ್ಲಿ ಜೆಟ್ಟಿ ನಿರ್ಮಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇನ್ನೊಂದು ವಾರದೊಳಗೆ ಕ್ಲಿಯರ್ ಆಗುವ ಸಾಧ್ಯತೆ ಇದೆ. -ಪ್ರಸನ್ನ ಶೇಟ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ ಹೊಸಜೆಟ್ಟಿ ಕಾಮಗಾರಿ ಪೂರ್ಣವಾಗಿಲ್ಲ. ಎಲ್ಲ ಬೋಟ್, ದೋಣಿಗಳು ಬಂದರೆ ಬೋಟ್ ಮತ್ತು ದೋಣಿ ನಿಲ್ಲಿಸಲು ಸ್ಥಳಾವಕಾಶ ಕೊರತೆ ಎದುರಾಗುತ್ತದೆ. ಇನ್ನೊಂದೆಡೆ ಮೀನುಗಾರರು ಹಾಗೂ ಮೀನುಗಾರ ಕಾರ್ಮಿಕರು ಸುಡುಬಿಸಿಲಿನಲ್ಲಿ ಮೀನುಗಾರಿಕಾ ಕೆಲಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈ ನಿಟ್ಟಿನಲ್ಲಿ ಇಲಾಖೆ ಶೀಘ್ರ ಕ್ರಮ ವಹಿಸಬೇಕು. ಮೀನುಗಾರರಿಗೆ ನೆಮ್ಮದಿಯಲ್ಲಿ ವ್ಯಾಪಾರ ಮಾಡಿ ಬದುಕಲು ಅವಕಾಶ ನೀಡಬೇಕು. -ಮಂಜುನಾಥ ಖಾರ್ವಿ ಸ್ಥಳೀಯ ಮೀನುಗಾರರು https://www.vijayavani.net/n-thirumaleshwara-bhat-receives-akalanka-award-in-udupi https://www.vijayavani.net/rashtra-kavi-govinda-pai-award

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net