

ಭಟ್ಕಳ: ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ತಾಯಿಯ ಭಕ್ತ ವರ್ಗದಲ್ಲಿ ಮೀನುಗಾರರ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಜ್ಯೇಷ್ಠ ಮಾಸದಲ್ಲಿ ಸರ್ಕಾರ ಮೀನುಗಾರಿಕೆಗೆ ನಿಬರ್ಂಧ ವಿಧಿಸುವುದರಿಂದ ಭಕ್ತರಿಗೆ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗಲಿದೆ ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ನುಡಿದರು.
ತಾಲೂಕಿನ ಅಳ್ವೆಕೋಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದೇವರ ಮರುಪ್ರತಿಷ್ಠಾ ಸುವರ್ಣ ಮಹೋತ್ಸವದಲ್ಲಿ ಭಕ್ತರಿಗೆ ಆಶಿರ್ವಚನ ನೀಡಿದರು. ಸುವರ್ಣ ಮಹೋತ್ಸವದ ಪ್ರತಿಷ್ಠಾ ಕಾರ್ಯವೂ ಜ್ಯೇಷ್ಠ ಮಾಸದಲ್ಲಿಯೇ ಆಗಬೇಕು ಎನ್ನುವುದು ಸ್ವತಃ ದೇವಿಯ ಇಚ್ಛೆಯೂ ಆಗಿದೆ. ಕ್ಷೇತ್ರದಲ್ಲಿ ತಾಯಿಯ ಅಪ್ಪಣೆಯ ವಿನಹ ಯಾವುದೇ ಕಾರ್ಯ ಮಾಡುವುದಿಲ್ಲ. ಮಳೆಗಾಲವಾದರೂ ಇದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ದೇವಿಯೂ ಪ್ರಸಾದ ನೀಡಿರುವುದು ಮೀನುಗಾರ ಭಕ್ತರ ಮೇಲಿನ ಮಮತೆ, ಕರುಣೆಯೇ ಕಾರಣವಾಗಿದೆ ಎಂದರು.
ದೇವಸ್ಥಾನದ ಧರ್ಮದರ್ಶಿ ಮಂಡಳಿಯ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಹನುಮಂತ ನಾಯ್ಕ, ಅರವಿಂದ ಪೈ, ಮಾರಿಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಎಂ. ಮೊಗೇರ, ಶ್ರೀ ದುರ್ಗಾದೇವಿ ಚಾರಿಟೆಬಲ್ ಟ್ರಸ್ಟ್‌ನ ಮಂಜುನಾಥ ಕೋಡಿಹಿತ್ಲ, ನಾರಾಯಣ ಬೆರ್ಮ ಮೊಗೇರ, ಶ್ರೀನಿವಾಸ ಜಿ. ಅಳ್ವೆಕೋಡಿ, ನರಸಿಂಹ ಪುರಾಣಿಕ, ಬಾಬು ಮೊಗೇರ, ಮಾದೇವ ತುಳಸಿಮನೆ, ಸಂತೋಷ ನಾಯ್ಕ, ಮಾರಿಜಾತ್ರಾ ಸಮಿತಿಯ ಉಪಾಧ್ಯಕ್ಷ ಬಿಳಿಯಾ ನಾಯ್ಕ, ಕಾರ್ಯದರ್ಶಿ ದೇವಪ್ಪ ಮೊಗೇರ, ದೇವಸ್ಥಾನದ ವ್ಯವಸ್ಥಾಪಕ ರಾಜು ಮೊಗೇರ ಇತರರು ಉಪಸ್ಥಿತರಿದ್ದರು.
ಮಹೋತ್ಸವಕ್ಕೆ ಆಗಮಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ಅಳ್ವೆಕೋಡಿಯ ಮಹಾದ್ವಾರದಿಂದ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ, ಭಜನೆ, ಕೀರ್ತನೆ ಹರಿನಾಮ ಸ್ಮರಣೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಶ್ರೀಗಳ ಪಾದ ಪೂಜೆ ನೆರವೇರಿಸಲಾಯಿತು.