ಜೇನುಕಲ್ಲಮ್ಮ ಘಟ್ಟ ಆಗಲಿ ಪ್ರಸಿದ್ಧ ಯಾತ್ರಾ ಸ್ಥಳ

13 RPT 1
ರಿಪ್ಪನ್‌ಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಕೊನೆಯ ಜಾತ್ರಾಮಹೋತ್ಸದ ನಿಮಿತ್ತ ಹರತಾಳು ಹಾಲಪ್ಪ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
Published on

ರಿಪ್ಪನ್‌ಪೇಟೆ: ಪೌರಾಣಿಕ ಹಿನ್ನೆಲೆಯಿರುವ ಜೇನುಕಲ್ಲಮ್ಮ ಘಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮೂಲಕ ಒಂದು ಜನಾಕರ್ಷಣೆಯ ಯಾತ್ರಾಸ್ಥಳವನ್ನಾಗಿ ನಿರ್ಮಾಣ ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಕೋಡೂರು ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸದ ಕೊನೆಯ ದಿನವಾದ ಶುಕ್ರವಾರ ಭಾಗವಹಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಈ ಪ್ರದೇಶದ ಜನರ ಆರಾಧ್ಯ ದೈವವಾಗಿರುವ ಶ್ರೀ ಜೇನುಕಲ್ಲಮ್ಮ ಪುರಾತನವಾಗಿ ವನದೇವತೆಯೆಂದೇ ಪ್ರಸಿದ್ಧಳಾಗಿದ್ದಳು. ಪ್ರಕೃತಿ ಸೌಂದರ್ಯದ ನಡುವೆ ಕಲ್ಲು ಬಂಡೆಗಳ ಮಧ್ಯೆ ನೆಲೆ ನಿಂತ ತಾಯಿಗೆ ಸದಾ ಜೇನುಗಳ ರಕ್ಷಣೆ ಮಾಡುತ್ತಿದ್ದರ ಪರಿಣಾಮವಾಗಿ ಜೇನುಕಲ್ಲಮ್ಮನೆಂದು ಪ್ರಚಲಿತಗೊಂಡಿದ್ದಾಳೆ. ಇಂತಹ ಸುಂದರ ಮನೋಹರವಾದ ರಮಣೀಯ ತಾಣದಲ್ಲಿ ಹಿಂದಿನವರು ಸುಮಾರು 23 ಎಕರೆ ಜಾಗವನ್ನು ದೇವಿಯ ಕ್ಷೇತ್ರಕ್ಕಾಗಿ ದಾಖಲಾತಿಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ವಿಶೇಷ ಯೋಜನೆಯಿಂದ ಕ್ಷೇತ್ರ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿದ್ದರು. ಮಾಜಿ ಶಾಸಕ ಬಿ.ಸ್ವಾಮಿರಾವ್ ನೇತೃತ್ವದ ವ್ಯವಸ್ಥಾಪನಾ ಸಮಿತಿಯ ವಿಶೇಷ ಆಸಕ್ತಿಯಿಂದ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ 1.50 ಕೋಟೆ ರೂ. ಅನುದಾನ ಮಂಜೂರು ಮಾಡಿದೆ. ತಾಂತ್ರಿಕ ಕಾರಣಗಳಿಂದ ಇಂದಿಗೂ ಹಣ ಬಿಡುಗಡೆಯಾಗದ ಕಾರಣ ಶಾಸಕರು ವಿಶೇಷ ಆಸಕ್ತಿವಹಿಸಿ ಹಣ ಬಿಡುಗಡೆಗೊಳಿಸುವುದರೊಂದಿಗೆ ಕಟ್ಟಡ ಕಾಮಗಾರಿಯ ವೇಗ ಹೆಚ್ಚಿಸಬೇಕಿದೆ ಎಂದರು.
ಬ್ರಹ್ಮೇಶ್ವರ, ರಾಮಚಂದ್ರಾಪುರ, ಕೊಡಚಾದ್ರಿ, ಕೊಲ್ಲೂರು, ಹುಂಚ, ಇಕ್ಕೇರಿ, ಕೆಳದಿ ಹಾಗೂ ಜೋಗ ಜಲಪಾತ, ಜೇನುಕಲ್ಲಮ್ಮ ಘಟ್ಟದ ಸುತ್ತಮುತ್ತಲಿನ ಯಾತ್ರಾಸ್ಥಳಗಳಾಗಿದ್ದು ಸರ್ಕಾರದಿಂದ 5 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿ ಘಟ್ಟ ಕ್ಷೇತ್ರವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಬೇಕು ಎಂದರು.
ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್, ಗ್ರಾಪಂ ಅಧ್ಯಕ್ಷ ಉಮೇಶ್, ಪ್ರಮುಖರಾದ ವಿಜೇಂದ್ರರಾವ್, ಜಯಪ್ರಕಾಶ ಶೆಟ್ಟಿ, ಸುಧೀಂದ್ರ, ಡಾಕಪ್ಪ ಬೆಳ್ಳೂರು, ವೀರೇಶ ಆಲುವಳ್ಳಿ, ಮೆಣಸೆ ಆನಂದ, ಮಂಡಾನಿ ಮೋಹನ, ಕಲ್ಯಾಣಪ್ಪ ಗೌಡ ಇತರರಿದ್ದರು.

ವಿಶೇಷ ಪೂಜೆ
ಅ.15ರಿಂದ 24ರವರೆಗೆ ಅಮ್ಮನವರ ಗುಡಿಯಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಅನ್ನ ಸಂತರ್ಪಣೆ, ವಿಜಯದಶಮಿ ದಿನದಂದು ಚಂಡಿಕಾ ಹೋಮ, ನವರಾತ್ರಿಯ ದಿನಗಳಲ್ಲಿ ದೇವಿಯ ಪಾರಾಯಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net