

ತುಮಕೂರು : ತೆಂಗು, ಅಡಕೆ ಸೇರಿ ಬಹುತೇಕ ಎಲ್ಲ ಬೆಳೆಯ ಇಳುವರಿಯ ಮೂಲ ಎನಿಸಿರುವ ‘ಜೇನು’ ಸಾಕಣೆಗೆ ಜನರು ಮನಸ್ಸು ಮಾಡುತ್ತಿದ್ದಾರೆ. ಸಮಗ್ರ ಕೃಷಿ ಜತೆ ಜೇನು ಕೃಷಿಯೂ ಬೆಸೆದುಕೊಂಡಿದ್ದು, ತೆಂಗಿನ ಸೀಮೆಯಲ್ಲಿಯೂ 3500 ರೈತರು ಇದರಲ್ಲಿ ತೊಡಗಿಸಿಕೊಂಡಿದ್ದು ಜೇನು ಸಾಕಾಣಿಕೆ ಜನಪ್ರಿಯವಾಗುತ್ತಿದೆ.
ಜೇನು ಕೃಷಿಗೆ ಸರ್ಕಾರವು ಸಹಾಯಧನ, ಪ್ರೋತ್ಸಾಹಧನ ಹಾಗೂ ಸಾಕಾಣಿಕೆ ತರಬೇತಿ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಇದರಿಂದ ಬಹುತೇಕರು ತೆಂಗು, ಬಾಳೆ, ಅಡಕೆಯಂತಹ ಮುಖ್ಯ ವಾಣಿಜ್ಯ ಬೆಳೆಗಳ ಜತೆಗೆ ಜೇನು ಕೃಷಿಯನ್ನೂ ಅಳವಡಿಸಿಕೊಂಡು ವರ್ಷ ಪೂರ್ತಿ ಆದಾಯ ತರುವ ಉಪಕಸುಬನ್ನಾಗಿಸಿಕೊಂಡಿದ್ದಾರೆ.
ಜೇನು ಹುಳುಗಳ ಪರಾಗಸ್ಪರ್ಶದಿಂದಲೇ ತೆಂಗಿನ ಇಳುವರಿ ಹೆಚ್ಚಾಗುತ್ತಿರುವುದು ಸಂಶೋಧನೆಗಳಿಂದಲೂ ದೃಢವಾಗಿದ್ದು, ಜೇನು ಸಾಕಣೆ ತೆಂಗಿನ ತೋಟಗಳಿಗೆ ಹೇಳಿ ಮಾಡಿಸಿದ ಉಪಕಸುಬು ಎನಿಸಿಕೊಂಡಿದೆ. ರಾಜ್ಯದಲ್ಲಿ 18 ಸಾವಿರ ಜೇನು ಸಾಕಾಣಿಕೆಗಾರರು 5.81 ಲಕ್ಷ ಕೆಜಿ ಉತ್ತಮ ಗುಣಮಟ್ಟದ ಜೇನುತುಪ್ಪ ಉತ್ಪಾದಿಸುತ್ತಿದ್ದು, 8.14 ಕೋಟಿ ರೂ. ವಹಿವಾಟು ನಡೆಸಿದ್ದಾರೆ.
ಜೇನು ಸಾಕಣೆಯಿಂದ ಸೌತೆ, ಕುಂಬಳ, ಏಲಕ್ಕಿ, ಕಲ್ಲಂಗಡಿ, ಲವಂಗ ಬೆಳೆ ಸೇರಿ ವಿವಿಧ ಬೆಳೆಗಳಲ್ಲಿ ವಿವಿಧ ಪ್ರವಾಣದಲ್ಲಿ ಇಳುವರಿ ಹೆಚ್ಚಿಸಿಕೊಂಡು ಲಾಭ ಪಡೆಯಬಹುದಾಗಿದೆ.
ಜೇನು ತುಪ್ಪ ವಾನವನಿಗೆ ನಿಸರ್ಗ ನೀಡಿರುವ ಕೊಡುಗೆಯಾಗಿದ್ದು, ಅಪಾರ ಔಷಧೀಯ ಗುಣ ಹೊಂದಿದೆ. 100 ಗ್ರಾಂ ಜೇನುತುಪ್ಪ 6 ಮೊಟ್ಟೆ, 1300 ಮಿ.ಲೀ. ಹಾಲು, 2ಕೆಜಿ ಹಸಿ ಬಟಾಣಿ, 800 ಗ್ರಾಂ ಒಣ ದ್ರಾಕ್ಷಿ, 1250 ಗ್ರಾಂ ಸೇಬು, 2 ಕೆಜಿ ಕ್ಯಾರೆಟ್‌ಗೆ ಸಮವಾಗಿದೆ. ಒಟ್ಟಾರೆಯಾಗಿ 100 ಗ್ರಾಂ ಜೇನುತುಪ್ಪದ ಶಕ್ತಿ 400 ಕ್ಯಾಲೊರೀಸ್.
ತೆಂಗು ಇರುವವರಿಗೆ ಜೇನು ವರದಾನ! : ಜೇನು ಸಾಕಾಣಿಕೆ ಕೇವಲ ಜೇನು ತುಪ್ಪ ಮತ್ತು ಮೇಣದ ಸಲುವಾಗಿ ವಾತ್ರ ಎಂಬ ಅಭಿಪ್ರಾಯ ಬದಲಾಗಿದೆ. ತೋಟಗಾರಿಕೆ ತಜ್ಞರ ಪ್ರಕಾರ ಶೇ.70 ಆಹಾರ ಬೆಳೆಗಳು, ಶೇ.80ಕ್ಕೂ ಹೆಚ್ಚು ಹಣ್ಣು ತರಕಾರಿ ಮತ್ತು ಅರಣ್ಯ ಬೆಳೆಗಳು ಹಾಗೂ ಶೇ.50ಕ್ಕಿಂತಲೂ ಹೆಚ್ಚು ಬೀಜದಿಂದ ವಂಶಾಭಿವೃದ್ಧಿ ಹೊಂದುವ ಸಸ್ಯಗಳು ಪರಾಗ ಸ್ಪರ್ಶಕ್ಕಾಗಿ ಜೇನುನೊಣಗಳನ್ನೇ ಅವಲಂಬಿಸಿವೆ.
ಸ್ನೇಹ ಮತ್ತು ಸಂಜೀವಿ ಜೇನುನೊಣಗಳು ಗಿಡ, ಬಳ್ಳಿಗಳಿಂದ ಮಕರಂದ ಸಂಗ್ರಹಿಸಿ ಜೇನು ಉತ್ಪಾದಿಸುತ್ತವೆ. ಜೇನುಗಳ ಜತೆ ಒಡನಾಟ ಮನಸ್ಸಿಗೆ ಮುದ ನೀಡುವುದಲ್ಲದೆ ಜೇನು ಉತ್ಪನ್ನಗಳಲ್ಲಿ ವೈದ್ಯಕೀಯ ಅಂಶಗಳಿರುವುದೂ ಸಾಕಾಣಿಕೆಯ ಮಹತ್ವ ಹೆಚ್ಚಾಗಿದೆ. ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನುನೊಣ ಜನರೊಂದಿಗೆ ಹತ್ತಿರವಾಗಿದೆ.
ಔಷಧ ತಯಾರಿಕೆ, ಆಹಾರ ಪದಾರ್ಥಗಳು, ಬೇಕರಿ ಉತ್ಪನ್ನಗಳು ಹಾಗೂ ಸೌಂದರ್ಯ ವರ್ಧಕಗಳಲ್ಲಿ ಹೆಚ್ಚಾಗಿ ಜೇನಿನ ಬಳಕೆಯಾಗುತ್ತಿದೆ. ಜೇನು ಸಾಕಾಣಿಕೆಯ ಮುಖ್ಯ ಉದ್ದೇಶ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಿಸುವುದು ಹಾಗೂ ಜೇನು ಮತ್ತು ಮೇಣ ಉತ್ಪಾದಿಸುವುದಾಗಿದೆ.
ಜೇನುನೊಣ ಬಗೆಗಳು : ದೇಶದಲ್ಲಿ 4 ದೇಶಿಯ ತಳಿ ಮತ್ತು 1 ವಿದೇಶಿ ತಳಿ ಸೇರಿ ಒಟ್ಟು 5 ಬಗೆಯ ಜೇನು ನೊಣಗಳಿವೆ. ಮುಖ್ಯವಾಗಿ ತುಡುಬೆ, ಕಡ್ಡಿ, ಕೋಲು, ಹೆಜ್ಜೇನು, ಮುಜೆಂಟಿ, ಪಾಶ್ಚಿವಾತ್ಯ ತುಡುಬೆ ಜೇನು (ವಿದೇಶಿ) ತಳಿ ಜೇನುಗಳಿದ್ದು ತುಡುಬೆ, ಮುಜೆಂಟಿ ಮತ್ತು ಪಾಶ್ಚಿವಾತ್ಯ ತುಡುಬೆ ಜೇನುಗಳು ಸಾಕು ತಳಿಗಳಾಗಿವೆ. ಜಿಲ್ಲೆಯಲ್ಲಿ ಹೆಚ್ಚು ರೈತರು ಕೃಷಿ ಜತೆಗೆ ತುಡುಬೆ ಜೇನು ಸಾಕಾಣಿಕೆ ಉಪ ಕಸುಬಾಗಿಸಿಕೊಂಡಿದ್ದಾರೆ.
ಸರ್ಕಾರದಿಂದ ದೊರೆಯುವ ಸಹಾಯಧನ ಸದ್ಬಳಕೆ ವಾಡಿಕೊಂಡು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯುವ ಕಸುಬಗಳಲ್ಲಿ ಜೇನು ಕೃಷಿ ಮುಂಚೂಣಿಯಲ್ಲಿದೆ. ರೈತರು ಹೆಚ್ಚಾಗಿ ತರಬೇತಿ ಪಡೆದು ಜೇನು ಕೃಷಿ ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 3500 ರೈತರು ಜೇನುಕೃಷಿಯಲ್ಲಿ ತೊಡಗಿದ್ದಾರೆ. ಬಿ.ರಘು, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ