ಮಾಜಿ ಸಚಿವ ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ

B.A.Jevijaya
Published on

ಮಡಿಕೇರಿ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಎ.ಜೀವಿಜಯ ಹೇಳಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷ ರಾಜಕಾರಣದಲ್ಲಿ ತೊಡಗಿಸಿಕೊಂಡು ಜನಸೇವೆ ಮಾಡಿದ್ದೇನೆ. ರಾಜಕೀಯದಲ್ಲಿ ಸತ್ವ ಇರದ ತತ್ವ, ಸಿದ್ಧಾಂತಗಳು ಮರೆಯಾಗುತ್ತಿದೆ. ಕೊಡಗಿನಲ್ಲಿ ಬೇರೆ ಜಿಲ್ಲೆಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಹೊರಗಿನವರನ್ನು ಅಭ್ಯರ್ಥಿ ಮಾಡಿದರೆ ಕಾರ್ಯಕರ್ತರ ವಿರೋಧ ಇದೆ ಎಂದು ರಾಜ್ಯ ನಾಯಕರಿಗೆ ಹೇಳಿದ್ದೆ. ಆದರೆ ನನ್ನ ಮಾತಿಗೆ ಯಾವುದೇ ಬೆಲೆ ಸಿಗಲಿಲ್ಲ. ರಾಜೀನಾಮೆ ಪತ್ರವನ್ನೂ ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸಿದ್ದೇನೆ ಎಂದರು.


ಈಗಿನ ಪರಿಸ್ಥಿಯಲ್ಲಿ ರಾಜಕೀಯ ಹೊಲಸಾಗಿದೆ. ಇಂಥ ಸನ್ನಿವೇಶದಲ್ಲಿ ರಾಜಕೀಯ ಮಾಡುವುದು ಅಸಾಧ್ಯ. ಹಣ ಬಲದಿಂದ ಅಧಿಕಾರ ಪಡೆಯಲಾಗುತ್ತಿದೆ. ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮರಳಿ ಪಡೆಯಲು ಭ್ರಷ್ಟಾಚಾರ ಮಾಡುತ್ತಾರೆ. ಜನತೆ ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಲ್ಲ. ಕರ್ತವ್ಯ ನಿಷ್ಠೆ ಪಾಲಿಸಿದ್ದೇನೆ. ಇದೀಗ ಕಾಂಗ್ರೆಸ್‌ನಿಂದ ದೂರ ಸರಿಯುವ ಸಮಯ ಬಂದಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಯಾವುದೇ ಪಕ್ಷದ ಹಂಗಿಲ್ಲದೆ ಸ್ವತಂತ್ರನಾಗಿದ್ದೇನೆ. ಚುನಾವಣೆಯಲ್ಲಿ ಕೊಡಗಿನವರಿಗೆ ಬೆಂಬಲ ನೀಡುತ್ತೇನೆ. ಜಿಲ್ಲೆಯಲ್ಲಿ ರಾಜಕಾರಣಿಗಳಿಗೆ ಬರ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net