ಮಾಜಿ ಸಚಿವ ಜೀವಿಜಯ ಮೌನ: ಕಾಂಗ್ರೆಸ್‌ಗೆ ಆತಂಕ

14mdk02 Jeevijaya
Published on

ಮಡಿಕೇರಿ:

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನೇ ಸೋಲಿಸಿದ ಹೆಗ್ಗಳಿಕೆಯ ಮಾಜಿ ಸಚಿವ ಬಿ.ಎ. ಜೀವಿಜಯ ಕಣದಲ್ಲಿ ಇಲ್ಲದಿರುವ ಮೊದಲ ಚುನಾವಣೆ ಇದು. ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯಲು ಪ್ರಬಲ ಆಕಾಂಕ್ಷಿ ಆಗಿದ್ದ ಇವರಿಗೆ ಅಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಂತೆ ಕಂಡುಬರುತ್ತಿದ್ದಾರೆ. ಗೆಲ್ಲುವ ಹುಮ್ಮಸ್ಸಿನಲ್ಲಿ ಇರುವ ಕಾಂಗ್ರೆಸ್‌ಗೆ ಜೀವಿಜಯ ಅವರ ಮೌನ ಮಡಿಕೇರಿ ಕ್ಷೇತ್ರದಲ್ಲಿ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ. ಹಾಗಾಗಿಯೇ ಪಕ್ಷದ ಮುಖಂಡರು ಈ ಹಿರಿಯ ನಾಯಕನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ ಸದ್ಯಕ್ಕೆ ಮೌನವಾಗಿ ಮನೆಯಲ್ಲಿ ಇದ್ದಾರೆ. ಈ ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಬಿಜೆಪಿಗೆ ನಿಕಟ ಪೈಪೋಟಿ ನೀಡಿದ್ದ ಜೀವಿಜಯ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ತಮಗೇ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲ ಯುವಕರನ್ನೇ ನಾಚಿಸುವಂತೆ ಕ್ಷೇತ್ರದಾದ್ಯಂತ ಓಡಾಡುತ್ತಾ ಗಮನ ಸೆಳೆದಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೀವಿಜಯ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ.

ಮಡಿಕೇರಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟವಾದ ಸಂದರ್ಭ ಪ್ರತಿಕ್ರಿಯೆ ನೀಡಿದ್ದ ಜೀವಿಜಯ, ಟಿಕೆಟ್ ಸಿಗದಿರುವುದಕ್ಕೆ ನನಗೇನೂ ವ್ಯಥೆ ಇಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ಜೆಡಿಎಸ್ ಸಂಪರ್ಕಿಸಿದ್ದೇನೆ ಎನ್ನುವುದು ಬರೀ ವದಂತಿ. ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಕೆಲಸ ಮಾಡುತ್ತೇನೆ ಎಂದಿದ್ದರು. ಆದರೆ ನಂತರದ ದಿನಗಳಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಮನೆಯಲ್ಲಿ ಇದ್ದುಕೊಂಡು ತಮ್ಮದೇ ಆದ ರಾಜಕೀಯ ಲೆಕ್ಕಾಚಾರದಲ್ಲಿ ಮಗ್ನರಾಗಿರುವಂತಿದೆ.

ಕೊಡಗಿನಲ್ಲಿ ಕಾಂಗ್ರೆಸ್‌ನ ಭದ್ರಕೋಟೆಗೆ ಮೊದಲು ಪೆಟ್ಟು ನೀಡಿದ್ದೇ ಬಿ.ಎ. ಜೀವಿಜಯ. ೧೯೮೩ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ನಂತರದ ೪೦ ವರ್ಷಗಳಲ್ಲಿ ಕೊಡಗು ಬಿಜೆಪಿಯ ವಶವಾಗುತ್ತಾ ಬಂದರೆ, ಜೀವಿಜಯ ತಮ್ಮ ವ್ಯಯಕ್ತಿಕ ವರ್ಚಸ್ಸು ಬೆಳೆಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಈಗಲೂ ವ್ಯಯಕ್ತಿಕ ಶಕ್ತಿ ಮೇಲೆ ಮತಗಳಿಸುವ ಶಕ್ತಿ ಇದ್ದರೆ ಅದು ಜೀವಿಜಯ ಅವರಿಗೆ ಮಾತ್ರ ಎನ್ನುವುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪುತ್ತಾರೆ. ಹಾಗಾಗಿಯೇ ಚುನಾವಣೆಯಲ್ಲಿ ಜೀವಿಜಯ ಅವರ ನಿರ್ಧಾರ ರಾಜಕೀಯ ಆಸಕ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನ ಹಿರಿಯರು ಜೀವಿಜಯ ಅವರ ನಿಕಟ ಸಂಪರ್ಕದಲ್ಲಿ ಇದ್ದಾರೆ. ಅವರ ಮನವೊಲಿಸುವ ಪ್ರಯತ್ನವೂ ನಡೆದಿದೆ. ಆದರೆ ಜೀವಿಜಯ ಮಾತ್ರ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ತಮ್ಮ ರಾಜಕೀಯ ಜೀವನಕ್ಕೆ ಉತ್ತಮ ಅಂತ್ಯ ಸಿಗಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ನೋವು ಅವರನ್ನು ಕಾಡುತ್ತಿರುವಂತಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಒಂದು ವೇಳೆ ತಮ್ಮ ಶಕ್ತಿ ಏನು ಎನ್ನುವುದನ್ನು ಜೀವಿಜಯ ಅವರ ರಾಜಕೀಯ ನಿರ್ಗಮನದ ವೇಳೆ ಪ್ರದರ್ಶಿಸಲು ಮುಂದಾದರೆ ಮಡಿಕೇರಿ ಕ್ಷೇತ್ರದ ಚುನಾವಣಾ ಲೆಕ್ಕಾಚಾರದಲ್ಲಿ ಸಾಕಷ್ಟು ಬದಲಾವಣೆಗಳು ಆಗಬಹುದು ಎನ್ನುತ್ತಾರೆ ರಾಜಕೀಯ ಪಂಡಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net