

ಮಂಡ್ಯ: ನೊಂದ ಜನಗಳ ಜತೆ ನಮ್ಮ ಹೆಜ್ಜೆ ಎನ್ನುವ ಜೀವಧಾರೆ ಟ್ರಸ್ಟ್‌ನ ಸದುದ್ದೇಶಕ್ಕೆ ಸಾವಿರಾರೂ ಜನರು ಕೈಜೋಡಿಸಿದ್ದಾರೆ. ಇದರೊಂದಿಗೆ ಒಂದೇ ಶಿಬಿರದಲ್ಲಿ ಬರೋಬರಿ 1,525 ಯೂನಿಟ್ ರಕ್ತ ಸಂಗ್ರಹ ಮಾಡಿದ ಮೈಲಿಗಲ್ಲನ್ನು ಜೀವಧಾರೆ ಸ್ಥಾಪಿಸಿದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ದಿನದ 24 ಗಂಟೆ ಅಂದರೆ ಹಗಲು ಮತ್ತು ರಾತ್ರಿ ರಕ್ತ ಸಂಗ್ರಹ ಶಿಬಿರ ಆಯೋಜಿಸಲಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಬಿರ ಹೊಸ ದಾಖಲೆ ಬರೆದಿದೆ. ನಿರೀಕ್ಷೆ ಹಾಗೂ ನಿಗದಿಪಡಿಸಿಕೊಂಡಿದ್ದ ಗುರಿಯನ್ನು ಮೀರಿ ರಕ್ತದಾನ ಶಿಬಿರದ ಇತಿಹಾಸದಲ್ಲಿ ಜೀವಧಾರೆ ಟ್ರಸ್ಟ್ ದಾಖಲೆಯ ಪುಟ ಸೇರಿದೆ.
ಗುರುವಾರ ಬೆಳಗ್ಗೆ ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ಸ್ವಾಮಿ ಬಸಪ್ಪನಿಗೆ ಪೂಜೆ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಮಟ್ಟದ ಅಧಿಕಾರಿಗಳು, ಗಣ್ಯರು, ಸಮಾಜಸೇವಕರು, ಉದ್ಯಮಿ ಜತೆಗೆ ಅಪಾರ ಸಂಖ್ಯೆಯಲ್ಲಿ ಯುವಕ, ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಮೊದಲ ದಿನದ ರಾತ್ರಿ 10ಗಂಟೆ ಹೊತ್ತಿಗೆ 1200 ಯೂನಿಟ್ ರಕ್ತಸಂಗ್ರಹವಾಗಿತ್ತು. ಈ ಸಮಯದಲ್ಲಿ ಗುರಿ ತಲುಪುವ ಬಗ್ಗೆ ಕೊಂಚ ಗೊಂದಲವೂ ಇತ್ತು. ಆದರೆ ಯುವಕರು ರಾತ್ರಿಯಾದರೂ ಆಗಮಿಸಿ ರಕ್ತದಾನ ಮಾಡಿದರು. ಮೊದಲೇ ನಿಗದಿಪಡಿಸಿದಂತೆ ಶುಕ್ರವಾರ ಬೆಳಗ್ಗೆ 8ಗಂಟೆಗೆ ಶಿಬಿರ ಮುಕ್ತಾಯವಾಗಬೇಕಿತ್ತಾದರೂ ದಾನಿಗಳ ಸಂಖ್ಯೆ ಇಳಿಕೆಯಾಗಲೇ ಇಲ್ಲ. ಇದರಿಂದಾಗಿ ಕೆಲ ಗಂಟೆ ಮುಂದುವರೆಸಲಾಯಿತು. ಆದಾಗ್ಯೂ ಒತ್ತಾಯದಲ್ಲಿಯೇ ಶಿಬಿರವನ್ನು ಮುಕ್ತಾಯಗೊಳಿಸಬೇಕಾಯಿತು. ಇದರೊಂದಿಗೆ ಜೀವಧಾರೆ ಟ್ರಸ್ಟ್ ಅಂದುಕೊಂಡ ಗುರಿ ಸಾಧಿಸಿತು.
ಎಲ್ಲಿಗೆ ಎಷ್ಟೆಷ್ಟು ರಕ್ತ ಹಂಚಿಕೆ?: ಶಿಬಿರದಲ್ಲಿ 1,525 ಯೂನಿಟ್ ರಕ್ತಸಂಗ್ರಹವಾಯಿತು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ 213 ಯೂನಿಟ್, ಆದಿಚುಂಚನಗಿರಿ ಆಸ್ಪತ್ರೆಗೆ 106 ಯೂನಿಟ್, ಬೆಂಗಳೂರು ಕಮಾಂಡೋ ಹಾಸ್ಪಿಟಲ್ಗೆ 57 ಯೂನಿಟ್, ಮಂಡ್ಯ ಜಿಲ್ಲಾಸ್ಪತ್ರೆಗೆ 1,011 ಯೂನಿಟ್, ಚಾಮರಾಜನಗರ ಜಿಲ್ಲಾಸ್ಪತ್ರೆಗೆ 138 ಯೂನಿಟ್ ರಕ್ತವನ್ನು ಹಸ್ತಾಂತರ ಮಾಡಲಾಯಿತು.
ವಿಶೇಷವಾಗಿ ದಾಖಲೆ ಬರೆದ ಶಿಬಿರದಲ್ಲಿ ಮಿಮ್ಸ್‌ನ 100ಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇವೆ ಶ್ಲಾಘನೀಯ. ಯಾರಿಗೂ ಬೇಸರವಾಗದಂತೆ ಶಿಬಿರದಲ್ಲಿ ನಡೆದುಕೊಂಡರು. ಮೂರು ಪಾಳಿಯಲ್ಲಿ ಇವರು ಕರ್ತವ್ಯ ನಿರ್ವಹಿಸಿದರು. ಶಿಬಿರಕ್ಕೆಂದು ಸರ್ಕಾರಿ ಆಸ್ಪತ್ರೆಯಿಂದ 150 ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು.
ತನ್ನ ದಾಖಲೆ ಅಳಿಸಿದ ಟ್ರಸ್ಟ್: 345ನೇ ರಕ್ತದಾನ ಶಿಬಿರದಲ್ಲಿ 1,525 ಯೂನಿಟ್ ಸಂಗ್ರಹಿಸುವ ಮೂಲಕ ಜೀವಧಾರೆ ಟ್ರಸ್ಟ್ ತನ್ನ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ. 2019ರಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಅಂದು ಒಂದೇ ದಿನ ಬರೋಬರಿ 904 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಇದು ಈವರೆಗಿನ ದಾಖಲೆಯಾಗಿ ಉಳಿದಿತ್ತು. ಇನ್ನು ಕಳೆದ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನಕ್ಕಾಗಿ ನಗರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 750 ಜನರು ರಕ್ತದಾನ ಮಾಡಿದರು. ಇನ್ನು ಇದೇ ಮೊದಲ ಬಾರಿಗೆ ಹಗಲು ರಾತ್ರಿ ರಕ್ತಸಂಗ್ರಹ ಶಿಬಿರ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಬಿರಕ್ಕೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ.