

ನೆಲಮಂಗಲ: ಜೆಇಇ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಪಟ್ಟಣದ ಹೊಯ್ಸಳ ಪದವಿಪೂರ್ವ ಕಾಲೇಜಿನ ಸುಮಾರು 20 ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತಮಂಡಳಿಯಿಂದ ಸನ್ಮಾನಿಸಲಾಯಿತು.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಕೆಲ ದಿನಗಳ ಹಿಂದೆಯಷ್ಟೆ ದೇಶದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದು, ಕಾಲೇಜಿನ ಜಿ.ಕೆ.ಪ್ರಜ್ವಲ್ ಶೇ.98 ತಗೆದುಕೊಂಡಿದ್ದು, 5 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದಾರೆ. ಜತೆಗೆ ಕಾಲೇಜಿನ ಒಟ್ಟು 20 ವಿದ್ಯಾರ್ಥಿಗಳು ಜೆಇಇಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬ ಉದ್ದೇಶದಿಂದ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಳ್ಳಲು ಆಸಕ್ತಿ ಇರುವ ದ್ವಿತೀಯ ವರ್ಷದ ವಿಜ್ಞಾನದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭದಿಂದಲೇ ವಿಶೇಷ ಜೆಇಇ ಪರೀಕ್ಷೆಗೆ ಬೇಕಾದ ತರಬೇತಿಯನ್ನು 3 ತಿಂಗಳ ಕಾಲ ನೀಡಿದ್ದ ಪರಿಣಾಮ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದು ಸಂತೋಷ ತಂದಿದೆ. ವೈದ್ಯಕೀಯ ಶಿಕ್ಷಣಕ್ಕೂ ಅವಶ್ಯವಿರುವ ನೀಟ್ ಪರೀಕ್ಷೆ ತರಬೇತಿ ನೀಡಲಾಗುವುದು ಎಂದು ಪ್ರಾಂಶುಪಾಲ ಗೌರಿಶಂಕರ್ ತಿಳಿಸಿದರು.
ಜೆಇಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡ ವಿದ್ಯಾರ್ಥಿಗಳು ಎನ್‌ಐಟಿ, ಐಐಟಿ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಗ್ರಾಮೀಣಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ಅವಶ್ಯವಿರುವ ತರಬೇತಿ ಜತೆಗೆ ಶ್ರಮವಹಿಸಬೇಕು ಎಂದು ಉಪಪ್ರಾಂಶುಪಾಲ ಗೋಪಾಲ್ ತಿಳಿಸಿದರು.