

ಬೆಂಗಳೂರು: ದೇಶದ ವಿವಿಧೆಡೆ ಇರುವ ಐಐಟಿ ವತ್ತು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಬುಧವಾರ ನಡೆಸಿದ ಜೆಇಇ ಮೇನ್ಸ್ ಸೆಷನ್-1ರಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ಜರುಗಿತು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ದೇಶಾದ್ಯಂತ ಜ.22ರಿಂದ 30ರವರೆಗೆ ಜೆಇಇ ಮೇನ್ಸ್ ಸೆಷನ್-1ಅನ್ನು ನಡೆಸುತ್ತಿದೆ. ಈ ಅಂಗವಾಗಿ ಬುಧವಾರ ನಗರದ ಹಲವು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಆರ್‌ಟಿ ನಗರ ಕೇಂದ್ರದಲ್ಲಿ ಸುಮಾರು 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆನ್‌ಲೈನ್ ಮಾದರಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 20ಕ್ಕೂ ಅಧಿಕ ವಿದ್ಯಾರ್ಥಿಗಳ ಕಂಪ್ಯೂಟರ್ ಆ್ ಆಗುವುದು, ಮೌಸ್ ಸರಿಯಾಗಿ ವರ್ಕ್ ಆಗದಿರುವ ಘಟನೆ ನಡೆದಿದೆ. ಕೆಲವು ವಿದ್ಯಾರ್ಥಿಗಳಿಗೆ 2ರಿಂದ 3 ಬಾರಿ ಕಂಪ್ಯೂಟರ್ ಆ್ ಆದ ನಂತರ ಬೇರೊಂದು ಕಂಪ್ಯೂಟರ್ ಕೂಡ ನೀಡಲಾಗಿದೆ.
ಈ ಕುರಿತು ಮಾತನಾಡಿದ ವಿದ್ಯಾರ್ಥಿಯೊಬ್ಬರು, ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೂ ಪರೀಕ್ಷೆ ನಡೆಸಲಾಯಿತು. ಈ ವೇಳೆ 2 ಬಾರಿ ಕಂಪ್ಯೂಟರ್ ಆ್ ಆಯಿತು. ಮೂರನೇ ಬಾರಿಗೆ ಬೇರೊಂದು ಕಂಪ್ಯೂಟರ್ ನೀಡಿದರು. ಸುಮಾರು 20 ನಿಮಿಷಕ್ಕೂ ಹೆಚ್ಚಿನ ಸಮಯ ವ್ಯರ್ಥವಾಯಿತು. 75 ಪ್ರಶ್ನೆಗಳಲ್ಲಿ ಕೇವಲ 40 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಯಿತು. ಸಾಕಷ್ಟು ಗಾಬರಿ ಕೂಡ ಆಯಿತು. ನನ್ನಂತೆಯೇ ಹಲವು ಮಂದಿಗೆ ಸಮಸ್ಯೆ ಎದುರಾಯಿತು ಎಂದು ತಿಳಿಸಿದ್ದಾರೆ.
ನಾಗರಬಾವಿ ಕೇಂದ್ರದಲ್ಲಿ ಮರು ನಿಗದಿ:
ನಾಗರಬಾವಿ ಕೇಂದ್ರದಲ್ಲಿ ನಿಗದಿಯಾಗಿದ್ದ ಪರೀಕ್ಷೆಯಲ್ಲಿ 114 ವಿದ್ಯಾರ್ಥಿಗಳಿದ್ದರು. ಅಲ್ಲಿಯೂ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮರು ನಿಗದಿ ಮಾಡಲಾಗಿದೆ ಎಂದು ಪರೀಕ್ಷಾ ಕೇಂದ್ರವು ತಿಳಿಸಿದೆ ಎಂದು ವಿದ್ಯಾರ್ಥಿಯ ಪಾಲಕರೊಬ್ಬರು ತಿಳಿಸಿದರು.