ಹೊಟ್ಟೆಕಿಚ್ಚು ವ್ಯಕ್ತಿತ್ವದ ನಾಶಕ್ಕೆ ಮೂಲ

Jealousy is the root of personality destruction
ನಾಲತವಾಡದ ಬಸವ ಕೇಂದ್ರದ ಸಹಯೋಗದೊಂದಿಗೆ ಪಟ್ಟಣದ ಶಿವಲಿಂಗಪ್ಪ ಗಡೇದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ’ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಶರಣ ಸಾಹಿತಿ, ಶಿಕ್ಷಕ ರಾಜು ಹಾದಿಮನಿ ಮಾತನಾಡಿದರು. ಬಸವರಾಜ ಪೂಜಾರಿ, ಪಿ.ಜಿ.ಬಿರಾದಾರ, ಎ.ಎಸ್. ಪಟ್ಟಣಶೆಟ್ಟಿ, ಗಂಗಪ್ಪ ಜಾವಳಗೇರಿ ಇತರರಿದ್ದರು.
Published on

ನಾಲತವಾಡ: ಕೋಪದಿಂದ ಹಲ್ಲು ಕಡಿಯುವವನ ಸಿಟ್ಟು ತನ್ನ ದವಡೆಗೇ ಮೂಲವಾಗುವಂತೆ ಮತ್ತೊಬ್ಬರ ಬಗ್ಗೆ ಕಟ್ಟಿಕೊಳ್ಳುವ ಹೊಟ್ಟೆಕಿಚ್ಚು ತನ್ನ ವ್ಯಕ್ತಿತ್ವದ ನಾಶಕ್ಕೆ ಮೂಲವಾಗುತ್ತದೆ ಎಂದು ಶರಣ ಸಾಹಿತಿ, ಶಿಕ್ಷಕ ರಾಜು ಹಾದಿಮನಿ ಹೇಳಿದರು.

ನಾಲತವಾಡದ ಬಸವ ಕೇಂದ್ರದ ಸಹಯೋಗದೊಂದಿಗೆ ಪಟ್ಟಣದ ಶಿವಲಿಂಗಪ್ಪ ಗಡೇದ ಅವರ ಮನೆಯಲ್ಲಿ ಭಾನುವಾರ

ಹಮ್ಮಿಕೊಂಡಿದ್ದ ’ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುಗಳ ವಚನ ನಿರ್ವಚನ ಮಾಡಿ ಅವರು ಮಾತನಾಡಿದರು.

ಒಮ್ಮೆ ಅಸೂಯೆ ದ್ವೇಷಗಳು ಮೈಮನ ಹೊಕ್ಕರೆ ಅವುಗಳಿಂದ ಹೊರ ಬರಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಅವು ನಿದ್ದೆ ಎಚ್ಚರಗಳಲ್ಲಿ ಕಾಡುತ್ತ ವ್ಯಕ್ತಿಯ ಶಕ್ತಿಯನ್ನೇ ತಿಂದು ಹಾಕುತ್ತವೆ. ದ್ವೇಷ- ಅಸೂಯೆ ಎಂಬ ದುರ್ಗುಣಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದ್ವೇಷಕ್ಕೆ ಅಸೂಯೆಯೇ ಮೂಲ. ತನ್ನಲ್ಲಿಲ್ಲದ್ದು ಇನ್ನೊಬ್ಬನಲ್ಲಿದೆ ಎನ್ನುವ ಹೊಟ್ಟೆಕಿಚ್ಚು ಅಸೂಯೆ ಹುಟ್ಟಲು ಕಾರಣವಾದರೆ ಅದನ್ನು ಮನದೊಳಗಣ ಕಿಚ್ಚಾಗಿ ಬೆಳೆಸಿದರೆ ಅದು ದ್ವೇಷದ ಬೆಂಕಿಯಾಗಿ ಹಬ್ಬುತ್ತದೆ. ಯಾರನ್ನಾದರೂ ದ್ವೇಷಿಸಲು ಕಾರಣಗಳು ಹಲವಿರಬಹುದು. ಕಾರಣಗಳನ್ನೇ ಮುಂದು ಮಾಡಿಕೊಂಡು ದ್ವೇಷವನ್ನು ಸಾಧಿಸುತ್ತ ಹೋದರೆ ಅದು ಇನ್ನಿಲ್ಲದಂತೆ ತನ್ನನ್ನೇ ಸುಡತೊಡಗುತ್ತದೆ. ತನ್ನ ಮನೆಯ ಕಿಚ್ಚು ತನ್ನನ್ನು ಸುಟ್ಟಲ್ಲದೆ ನೆರೆಯವರನ್ನು ಸುಡದು ನೋಡಾ ಎಂಬ ಶರಣರ ವಚನಗಳ ಸಾರದಂತೆ, ಸಂಬಂಧಗಳಲ್ಲಿ ಸ್ನೇಹ ಸೌಹಾರ್ದಗಳು ಬೆಳೆದರೆ ಅವು ವ್ಯಕ್ತಿತ್ವ ವಿಕಾಸಕ್ಕೆ ಪ್ರೋತ್ಸಾಹ ನೀಡುತ್ತವೆ. ಬಸವಾದಿ ಶಿವಶರಣರು ಕೋಪ, ಕ್ರೋಧ, ದ್ವೇಷ, ಅಹಂಕಾರ ಬಿಟ್ಟು ವಿನಯದಿಂದ ಬಾಳಲು ಕರೆ ನೀಡಿದ್ದಾರೆ. ದುರ್ಗುಣಗಳಿಂದ ಬಿಡುಗಡೆ ಪಡೆದರೆ ವ್ಯಕ್ತಿತ್ವದ ಬೆಳಗು ಜ್ಯೋತಿರ್ಲಿಂಗ ಸ್ವರೂಪಿಯಾಗುತ್ತದೆ ಎಂದು ಹೇಳಿದರು.

ಅಲ್ಲಮಪ್ರಭುಗಳ ವಚನವನ್ನು ಬಸವರಾಜ ಪೂಜಾರಿ, ಪಿ.ಜಿ.ಬಿರಾದಾರ, ಎ.ಎಸ್. ಪಟ್ಟಣಶೆಟ್ಟಿ, ಗಂಗಪ್ಪ ಜಾವಳಗೇರಿ ನಿರ್ವಚನ ಮಾಡಿದರು. ನಿಂಗಣ್ಣ ಅಗ್ನಿ, ಈಶ್ವರ ಕುಂಟೋಜಿ, ಸಂಗಣ್ಣ ಬಾರಡ್ಡಿ, ರಾಮನಗೌಡ ಅಮಾತಿಗೌಡ, ಗುಂಡಪ್ಪ ಅರಸನಾಳ, ಗಂಗಮ್ಮ ಕಡಿ, ಇಂದ್ರಮ್ಮ ಗಾದಿ, ಸರಸ್ವತಿ ರುದ್ರಗಂಟಿ, ಕಸ್ತೂರಬಾಯಿ ಗಡೇದ, ಶ್ರೀದೇವಿ ಗಡೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net