

ಚೇಳೂರು : ಪರ್ಯಾಯ ನಾಯಕತ್ವ ಸೃಷ್ಟಿಸಲು ಚಿಂತಿಸಿರುವ ಜೆಡಿಎಸ್ ವರಿಷ್ಠರ ತಂತ್ರಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಕ್ಷೇತ್ರದಲ್ಲಿ ಪ್ರತಿತಂತ್ರ ರೂಪಿಸುವಲ್ಲಿ ನಿರತರಾಗಿದ್ದು ಸರ್ವಜನಾಂಗದ ಜನರೊಂದಿಗಿರುವ ಹಿಡಿತ ಬಿಗಿಗೊಳಿಸಲು ಮುಂದಾಗಿದ್ದಾರೆ.
ಗುಬ್ಬಿ ತಾಲೂಕಿನ ಕಲ್ಲುಗುಡಿಯಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಹಾಗೂ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಶಿಡ್ಲೆಕೋಣದ ಶ್ರೀಸಂಯಯಕುಮಾರ ಸ್ವಾಮೀಜಿ ಭಾಗವಹಿಸುಂತೆ ಮಾಡುವ ಮೂಲಕ ಕ್ಷೇತ್ರದಲ್ಲಿ ನೆಲೆ ಉಳಿಸಿಕೊಳ್ಳುವ ಕೆಲಸ ಆರಂಭಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್, ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ಗುಬ್ಬಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ಕ್ರಿಯಾಯೋಜನೆ ರೂಪಿಸಲಾಗಿದೆ, ಕಲ್ಲುಗುಡಿ ಗ್ರಾಮದ ಕೆರೆಗೂ ನೀರು ಹರಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಅಂತರ್ಜಲ ವೃದ್ಧಿಗೆ ರೈತರು ಮುಂದಾಗಬೇಕು, ಅಂತರ್ಜಲವನ್ನು ಹೆಚ್ಚು ಉಪಯೋಗ ಮಾಡಿರುವ ಕಾರಣ ಅಂತರ್ಜಲ ಮಟ್ಟ ಕುಸಿದಿದೆ ಹಾಗಾಗಿ, ಭೂಮಿಯಲ್ಲಿ ನೀರನ್ನು ಇಂಗಿಸುವ ಕಾರ್ಯವನ್ನು ಹೆಚ್ಚಾಗಿ ಮಾಡಿ ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆ ಉಂಟಾಗದಂತೆ ಕೊಡುಗೆಯಾಗಿ ನೀಡಬೇಕು ಎಂದರು.
ಬಡವರ ಕ್ಷೇಯೋಭೀವೃದ್ಧಿಗಾಗಿ ದುಡಿಯುವ ರಾಜಕಾರಣಿ ನಾವಾಗಬೇಕು, ಆಗ ಜನರು ನಮಗೆ ಗೌರವ ಕೊಡುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಕೊಡದಿದ್ದರೆ ಜನರ ಸ್ಥಿತಿ ಶೋಚನೀಯವಾಗುತ್ತಿತ್ತು. ಅನ್ನಭಾಗ್ಯದ ಕಾರ್ಯಕ್ರಮ ಹಳ್ಳಿ ಹಳ್ಳಿಗೂ ಮುಟ್ಟಿದೆ, ಕಡುಬಡವನಿಗೂ ತಲುಪಿದೆ. ಕೊರೊನಾ ಸಂದರ್ಭದಲ್ಲಿ ಕಾರ್ಯಕ್ರಮ ಉಳಿಸಿದೆ ಎಂದರು.
ಶಿಡ್ಲೆಕೋಣದ ಶ್ರೀಸಂಯಯಕುಮಾರ ಸ್ವಾಮೀಜಿ ಮಾತನಾಡಿ, ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶಪ್ರಾಯರಾಗಿದ್ದು, ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ವಾಲ್ಮೀಕಿ ಬರೆದ ರಾಮಾಯಣ ಪ್ರಸ್ತುತ ಪ್ರಚಲಿತದಲ್ಲಿರುವ ಎಲ್ಲಾ ಘಟನೆಗಳನ್ನೂ ಒಳಗೊಂಡಂತೆ ವಿಜ್ಞಾನ-ತಂತ್ರಜ್ಞಾನವೂ ಅಡಗಿದೆ ಎಂದರು. ಸ್ಥಳೀಯ ಮುಖಂಡರಾದ ಮೂಡ್ಲಪ್ಪ, ಆನಂದ, ಸ್ವಾಮಿ, ರಂಗನಾಥ್, ಬಾಲಣ್ಣ, ಗುರು, ಮಹಲಿಂಗಪ್ಪ, ಕಾಂತರಾಜು ಇದ್ದರು.