

ಶೃಂಗೇರಿ: ಸಮಾಜದ ಕಟ್ಟಕಡೆಯ ಜನರ ನೋವನ್ನು ಅರ್ಥ್ಯೆಸಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ನಿರಂತರ ಹೋರಾಟ ಮಾಡುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಳಂಕರಹಿತ ಚಾರಿತ್ರ್ಯವುಳ್ಳ ಅಪರೂಪದ ರಾಜಕಾರಣಿ ಎಂದು ಜೆಡಿಎಸ್ ಜಿಲ್ಲಾ ಸಮಿತಿಯ ಪದಾಧಿಕಾರಿ ಜಿ.ಜಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್-ಬಿಜೆಪಿ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಕಂಡ ಧೀಮಂತ ನಾಯಕ. ದೇಶದ ಹಿತಕ್ಕಾಗಿ ಯಾವುದೇ ಲಾಭವಿಲ್ಲದೇ ದುಡಿಯುವ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಎಂಬುದು ಜೆಡಿಎಸ್ ವರಿಷ್ಠರ ಕನಸಾಗಿದೆ. ಹಾಗಾಗಿ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಪರಸ್ಪರ ಹೊಂದಾಣಿಕೆಯಿಂದ ಲೋಕಸಭಾ ಚುನಾವನೆಯನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಮೋದಿಯ ಕಾರ್ಯತತ್ಪರತೆ ಹಾಗೂ ದೇಶ ಜನರಿಗಾಗಿ ಮಾಡಿರುವ ಜನಪರ ಯೋಜನೆಗಳನ್ನು ಮನೆ-ಮನೆಗೆ ತೆರಳಿ ತಿಳಿಸುವ ಮೂಲಕ ನಮ್ಮ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ರಂಗನಾಥ್ ಮಾವಿನಕಾಡು ಮಾತನಾಡಿ, ಚುನಾವಣೆ ಕಾಲದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತೆರಳುವರ ಕುರಿತು ನಾವು ತಲೆಕೆಡಿಸಿ ಕೊಳ್ಳಬಾರದು. ಪಕ್ಷಾಂತರಿಗಳು ಮಾರಾಟದ ವಸ್ತುವಾಗಿದ್ದಾರೆ. ದೇಶವನ್ನು ಮುನ್ನಡೆಸುವ ಸಮರ್ಥ ನಾಯಕರು ಇರುವ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ದೇಶದ ಅಭಿವೃದ್ಧಿ ಮಾಡುತ್ತಾ ಯಾವುದೇ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ನಮ್ಮ ನಾಯಕರ ಮಾಡುವ ಕಾರ್ಯವೈಖ್ಯರಿಯನ್ನು ಇಡೀ ಜಗತ್ತೆ ಮೆಚ್ಚಿದೆ ಎಂದರು.
ರಾಜ್ಯ ಸರ್ಕಾರ ಏನು ಅಭಿವೃದ್ಧಿ ಮಾಡುತ್ತಿದೆ ಎಂಬುದನ್ನು ಜನರ ಮುಂದಿಟ್ಟು ನಾವು ಮತವನ್ನು ಯಾಚಿಸಬೇಕು. ಕೋಟ ಶ್ರೀನಿವಾಸ ಪೂಜಾರಿ ಅವರು ಸಾಮಾನ್ಯರ ನಾಡಿಮಿಡಿತವನ್ನು ಅರಿತ ಹೃದಯವಂತ ರಾಜಕಾರಣಿ. ಮಲೆನಾಡಿನಲ್ಲಿ ಇರುವ ಜಲ್ವಂತ ಸಮಸ್ಯೆಗಳ ಕುರಿತು ಅವರ ಬಳಿ ಸಾಕಷ್ಟು ಮಾಹಿತಿ ಇದೆ. ಇಂತಹ ವ್ಯಕ್ತಿ ಸಂಸದರಾದರೆ ಮಾತ್ರ ರೈತರ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಹೇಳಿದರು.
ನಾವು ಜನರಿಗೆ ಗ್ಯಾರಂಟಿ ನೀಡಿದ್ದೇವೆ ಎನ್ನುವವರು ಮಲೆನಾಡಿನಲ್ಲಿ ಹಲವು ವರ್ಷಗಳಿಂದ ಮಾಡಿದ ಅಭಿವೃದ್ಧಿ ಶೂನ್ಯ. ಇಲ್ಲಿರುವ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಾವು ಪ್ರಾಮಾಣಿಕವಾಗಿ ಪರಿಶ್ರಮಿಸಬೇಕು. ಜೆಡಿಎಸ್ ಬೆಂಬಲ ನೀಡಿದ್ದು, ಇದರಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ತಲಗಾರು, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಭರತ್ ಗಿಣಕಲ್, ಮುಖಂಡರಾದ ಶೆಟ್ಟಿಗದ್ದೆ ರಾಮಸ್ವಾಮಿ, ಹರೀಶ್ ವಿ.ಶೆಟ್ಟಿ, ನೂತನ್‌ಕುಮಾರ್, ಶ್ರೀನಿವಾಸ್ ಕಚ್ಚೋಡಿ, ಅಂಬ್ಲೂರು ರಾಮಕೃಷ್ಣ, ವೆಂಕಪ್ಪ ಆಚಾರ್ಯ, ಚಂದ್ರಶೇಖರ್ ಇತರರಿದ್ದರು.