

ಮಂಡ್ಯ: ಜೆಡಿಎಸ್‌ನ ಪಂಚರತ್ನ ಯಾತ್ರೆ ಜಿಲ್ಲೆಯಲ್ಲಿ ಮೂರು ದಿನ ಪೂರೈಸಿದ ಬಳಿಕ ಶುಕ್ರವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶ ಪಡೆಯಿತು. ಮಂಡ್ಯ ನಗರದ ಹೊರವಲಯ ಕ್ಯಾತುಂಗೆರೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿದರು.
ಇಬ್ಬರು ನಾಯಕರಿಗೂ ಜೆಸಿಬಿ ಮೂಲಕ ಹೂವಿನ ಸುರಿಮಳೆಗೈದು ಕ್ಷೇತ್ರಕ್ಕೆ ಸ್ವಾಗತಿಸಿದರು. ಕ್ಯಾತುಂಗೆರೆ ಗ್ರಾಮ ಪ್ರವೇಶಿಸಿದಾಗ ಮುಖಂಡರು ಮತ್ತು ಕಾರ್ಯಕರ್ತರು ದ್ರಾಕ್ಷಿಗಳಿಂದ ಮಾಡಲಾಗಿದ್ದ ಬೃಹತ್ ಹಾರವನ್ನು ಹಾಕುವ ಮೂಲಕ ಜೈಕಾರ ಮೊಳಗಿಸಿದರು. ಬಳಿಕ ಬೇವಿನಹಳ್ಳಿ ಗ್ರಾಮದಲ್ಲಿ ಬೃಹತ್ ಹೂವಿನ ಹಾರ ಹಾಗೂ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಯಾತ್ರೆಗೆ ಭರ್ಜರಿ ಸ್ವಾಗತ ನೀಡಲಾಯಿತು. 500ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ರ‌್ಯಾಲಿ ನಡೆಯಿತು.
ಮಂಡ್ಯ ತಾಲೂಕಿನ ಹೋಬಳಿ ಕೇಂದ್ರ ಕೊತ್ತತ್ತಿ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯ ಸ್ವಾಗತಕ್ಕೆ ಬೇಲೂರು, ಹೆಮ್ಮಿಗೆ, ಸೂನಗಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಕ್ರೇನ್ ಮೂಲಕ ಬೃಹತ್ ಹಾರ ಅರ್ಪಿಸಿ ಸಂಭ್ರಮಿಸಿದರು. ಗ್ರಾಮದ ಹೆಬ್ಬಾಗಿಲು ಪ್ರವೇಶಿಸಿದಾಗ ಕಬ್ಬಿನ ಹಾರ ಅರ್ಪಿಸುವ ಮೂಲಕ ಪಟಾಕಿ ಸಿಡಿಸಿ ಅಭಿಮಾನ ಮೆರೆದರು. ಕೊಡಿಯಾಲ ಗ್ರಾಮದಲ್ಲಿ ಮೂಸಿಂಬೆಗಳಿಂದ ಬೃಹತ್ ಗಾತ್ರದ ಹಾರ ಹಾಕಿ ವೀರಗಾಸೆಯೊಂದಿಗೆ ಸ್ವಾಗತಿಸಲಾಯಿತು. ತಡಗವಾಡಿ ಗ್ರಾಮದಲ್ಲಿ ಬೃಹತ್ ಹಾರ ಹಾಕಲಾಯಿತು.
ದಾರಿಯುದ್ದಕ್ಕೂ ಪ್ರತಿ ಗ್ರಾಮಗಳಲ್ಲಿ ಗ್ರಾಮಸ್ಥರು, ಕಾರ್ಯಕರ್ತರು ನಿಂತು ಜೈಕಾರ ಕೂಗುತ್ತಿದ್ದ ದೃಶ್ಯ ಕಂಡುಬಂತು. ಎಚ್‌ಡಿಕೆ ಮತ್ತು ಶಾಸಕ ರವೀಂದ್ರ ಜನರತ್ತ ಕೈ ಬೀಸಿ ಹಾಗೂ ನಮಸ್ಕರಿಸುತ್ತಿದ್ದರು. ತಮಟೆ, ನಗಾರಿ, ನಾದಸ್ವರದೊಂದಿಗೆ ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ರಥಯಾತ್ರೆಗೆ ಮೆರಗು ನೀಡಿದವು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಕಾನೂನು ಘಟಕದ ಅಧ್ಯಕ್ಷ ಬಸವರಾಜು, ಮುಖಂಡ ಎಚ್.ಕೆ.ರಾಮು ಇತರರಿದ್ದರು.
ರೈತರ ಪಕ್ಷ ಜೆಡಿಎಸ್‌ಗೆ ಅಧಿಕಾರ ಕೊಡಿ: ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಯೋಚನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಮಾತನಾಡಿದ ಅವರು, ರೈತರ ಪಕ್ಷ ಜೆಡಿಎಸ್‌ಗೆ ಅಧಿಕಾರ ಕೊಡಿ. ನಿಮ್ಮೆಲ್ಲರ ಆಶೀರ್ವಾದದಿಂದ 120ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕಿದೆ. ಆ ಮೂಲಕ ರಾಜ್ಯವನ್ನು ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಸವಾಲು ಸ್ವೀಕರಿಸಿದ್ದೇನೆ. ಶಾಸಕ ರವೀಂದ್ರ ಶ್ರೀಕಂಠಯ್ಯ ನೇರವಾದಿ, ಕುತಂತ್ರ ರಾಜಕಾರಣಿಯಲ್ಲ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ರೈತರ ಸಾಲಮನ್ನಾ ಮಾಡಿದ್ದೇನೆ. ರೈತರು ಸಾಲ ಮಾಡಿಕೊಳ್ಳದ ರೀತಿಯಲ್ಲಿ ಆರ್ಥಿಕವಾಗಿ ಸದೃಢವಾಗಿ ಬದುಕುವ ರೀತಿಯನ್ನು ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ. ಈ ಬಗ್ಗೆ ಮಾಹಿತಿಗಳನ್ನು ರಾಜ್ಯದ ಪ್ರತಿ ಮನೆ ಮನೆಗಳಿಗೆ ತಲುಪಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಅದಕ್ಕೆ ಕಾರಣ ಮೂರು ವರ್ಷದಿಂದ ಮಳೆಯಿಂದ ಬೆಳೆ ಹಾನಿ ಸೂಕ್ತ ಪರಿಹಾರ ನೀಡದಿರುವುದು. ಹಳೇ ಕಾಲದ ಸಿಸ್ಟಂನಲ್ಲಿ ಬೆಳೆ ಪರಿಹಾರ ನೀಡುತ್ತಿರುವುದರಿಂದ ರೈತರು ಮಾಡುವ ಖರ್ಚಿಗೂ ಸಾಲದು ಎಂದು ಟೀಕಿಸಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಗ್ರಾಮ ವಾಸ್ತವ್ಯದ ಮೂಲಕ ಜನಾನುರಾಗಿಯಾಗಿರುವ ಕುಮಾರಸ್ವಾಮಿ ಅವರು ನಾಡಿನ ಬಡವರು ಮತ್ತು ರೈತರ ಅಭ್ಯುದಯಕ್ಕೆ ಶ್ರಮಿಸುವ ಹೃದಯವಂತಿಕೆ ಹೊಂದಿರುವ ಜನನಾಯಕ. ಜನಸಾಮಾನ್ಯರ ಒಳಿತಿಗಾಗಿ ಪಂಚರತ್ನ ಯೋಜನೆ ರೂಪುಗೊಂಡಿದೆ. ಆರೋಗ್ಯ, ಶಿಕ್ಷಣ, ವಸತಿ, ಕೃಷಿ ಬಲವರ್ಧನೆ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಯೋಜನೆ ಜಾರಿಗೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.