

ಮಂಡ್ಯ : ಮೂರು ತಲೆಮಾರಿನಿಂದ ಕಣ್ಣೀರ ಕಥೆ ಹೇಳುವ ಜೆಡಿಎಸ್ ನಾಯಕರು ಹಾಸನದಂತೆ ಮಂಡ್ಯವನ್ನು ಅಭಿವೃದ್ಧಿಪಡಿಸದೆ ಪಂಚರತ್ನ ಯಾತ್ರೆ ಮೂಲಕ ಮತ್ತೊಮ್ಮೆ ಕಣ್ಣೀರ ಕಥೆ ಹೇಳಲು ಬರುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವ್ಯಂಗ್ಯವಾಡಿದೆ.
ಕಳೆದ ವಿಧಾನ ಸಭಾ ಚುನಾವಣೆ ಹಾಗೂ ಅಧಿಕಾರ ಹಿಡಿದ ವೇಳೆ ಮಹಪೂರ ಭರವಸೆ ನೀಡಿದ್ದ ಕುಮಾರಸ್ವಾಮಿ ಅವರು, ಭರವಸೆ, ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲರಾಗಿ ಈಗ ಅಭಿವೃದ್ಧಿ ವಿಚಾರ ಎತ್ತಿಕೊಂಡು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
೨೦೧೮ರಲ್ಲಿ ಅಧಿಕಾರ ಹಿಡಿದ ಕುಮಾರಸ್ವಾಮಿ ಅವರು ಜನಪರ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ೮೫೦೦ ಕೋಟಿ ರೂ ಬಿಡುಗಡೆ ಮಾಡಿದ್ದೇವೆ. ಶ್ರೀರಂಗಪಟ್ಟಣ ಸೇರಿದಂತೆ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಆಶ್ವಾಸನೆ ನೀಡಿದ್ದ ಅನುದಾನ ಎಲ್ಲಿ ಹೋಯಿತು ಅದನ್ನು ಪಂಚರತ್ನ ಯಾತ್ರೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್‌ಗೆ ಬದಲಾಗಿ ಸಾತನೂರು ಬಳಿ ೪೫೦ ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರ್ಖಾನೆ ಸ್ಥಾಪಿಸುವುದಾಗಿ ವಾಗ್ದಾನ ನೀಡಿದ್ದು ಮರೆತುಹೋಯಿತೇ? ಮಳವಳ್ಳಿ ಹಾಗೂ ಹಲಗೂರುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ೬೦೦ ಕೋಟಿ ರೂ. ಅನುದಾನ ನೀಡಿದ್ದು ಭರವಸೆಯಾಗಿಯೇ ಉಳಿದಿದೆ ಎಂದು ಛೇಡಿಸಿದ್ದಾರೆ.