

ಹುಬ್ಬಳ್ಳಿ: ಪಕ್ಷ ಸಂಟನೆ ಹಾಗೂ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಜಾತ್ಯತಿತ ಜನತಾದಳವನ್ನು (ಜೆಡಿಎಸ್) ಸನ್ನದ್ಧಗೊಳಿಸುವ ಹಿನ್ನೆಲೆಯಲ್ಲಿ ಅ. 12ರಂದು ನಗರದಲ್ಲಿ ಪುನಶ್ಚೇತನ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಬಿ. ಗಂಗಾಧರಮಠ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ನಗರದ ಹೊಸೂರ ಸಾಮ್ರಾಟ ಹಾಲ್ನಿಂದ ಪಕ್ಷದ ಮುಖಂಡರ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಗೋಕುಲ ರಸ್ತೆಯ ವಾಸವಿ ಹಾಲ್‌ನಲ್ಲಿ ವಿಭಾಗ ಮಟ್ಟದ ಕಾರ್ಯಾಗಾರ ನಡೆಯಲಿದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಸಂಟನೆಗಾಗಿ 21 ಪದಾಧಿಕಾರಿಗಳು ಇರುವ ಕೋರ್ ಕಮೀಟಿ ರಚನೆ ಮಾಡಲಾಗಿದೆ. 21 ಜನ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ನಡೆಯುವ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು.
ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ವಿಭಾಗದ ಸಭೆಯಲ್ಲಿ ಪದಾಧಿಕಾರಿಗಳು ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದರು.
ವಾಸವಿ ಹಾಲ್ವರೆಗೆ ನಡೆಯುವ ಮೆರವಣಿಗೆಯಲ್ಲಿ ಕುಂಭ ಮೇಳ, ಜಾಂಜ್, ಡೊಳ್ಳು ಸಹಿತ ವಿವಿಧ ಕಲಾ ತಂಡಗಳು ಗಮನ ಸೆಳೆಯಲಿವೆ. ಪದಾಧಿಕಾರಿಗಳು ಮೆರವಣಿಗೆ ಮಧ್ಯದಲ್ಲಿ ಸಾಗುವರು ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ, ವೈಎಸ್ವಿ ದತ್ತ, ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ಎಚ್.ಕೆ. ಕುಮಾರಸ್ವಾಮಿ, ಸಾ.ರಾ. ಮಹೇಶ, ಬಂಡೆಪ್ಪ ಕಾಶಂಪುರ, ವೆಂಕಟರಾವ್ ನಾಡಗೌಡ, ಸಿ.ಎಸ್. ಪುಟ್ಟರಾಜು, ಬಿ.ಎಂ. ಫಾರೂಕ್, ರಾಜೂಗೌಡ, ನೇಮಿರಾಜ ನಾಯಕ ಹಾಗೂ 21 ಪದಾಧಿಕಾರಿಗಳು ಕಾರ್ಯಾಗಾರ ನಡೆಸಲಿದ್ದಾರೆ.
ಪಕ್ಷದ ಪ್ರಮುಖರಾದ ಸಿದ್ದಲಿಂಗೇಶ ಮಹಾಂತ ಒಡೆಯರ, ವಿನಾಯಕ, ನವೀನ ಮಡಿವಾಳರ, ಗೋಪಾಲ ನೀರಲಗಿ, ಭಾಷಾಸಾಬ ಇತರರು ಗೋಷ್ಠಿಯಲ್ಲಿದ್ದರು.