ಮುಡಾ ಹಗರಣದ ವಿರುದ್ಧ ದೊಡ್ಡ ಹೋರಾಟ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ

JDS workers meeting mandya
Published on

ಮಂಡ್ಯ: ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ದೊಡ್ಡಮಟ್ಟದ ಹೋರಾಟ ನಡೆಸುತ್ತಿವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ ಅವ್ಯವಹಾರ ನಮ್ಮ ಮುಂದಿದೆ. ಸಾರ್ವಜನಿಕರು ಕಟ್ಟುವ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರು.
ಹಗರಣವನ್ನು ಕಲೆ ಹಾಕಿ ರಾಜ್ಯದ ಜನರ ಕಣ್ಣು ತೆರೆಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ರಾತ್ರಿ ಬೆಂಗಳೂರಿಗೆ ಬರುತ್ತಾರೆ. ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚೆ ಮಾಡಿ ಪಾದಯಾತ್ರೆ ಬಗ್ಗೆ ಸಲಹೆ ನೀಡಲಿದ್ದಾರೆ. ಹೋರಾಟ ಸಂಬಂಧ ಶೀಘ್ರವಾಗಿ ದಿನಾಂಕ ಬಿಡುಗಡೆ ಮಾಡಲಾಗುವುದು ಎಂದ ಅವರು, ಪ್ರತಿ ವಾರ ನಿಮ್ಮ ಜತೆ ಇರುತ್ತೇನೆ. ಪಕ್ಷದ ಕಚೇರಿಯಲ್ಲಿ ಕುಳಿತು ನಿಮ್ಮ ಕಷ್ಟ ಕೇಳುತ್ತೇನೆ. ಈಗಾಗಲೇ ಕೊಟ್ಟಿರುವ ಅರ್ಜಿಗೆ ಪರಿಹಾರ ಸಿಗುತ್ತದೆ. ನಿಮ್ಮ ಸಹಕಾರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಎಚ್‌ಡಿಕೆ ವಿರುದ್ದ ಸಿಎಂ ಸಿದ್ದರಾಮಯ್ಯ ಮುಡಾ ದಾಖಲೆ ಬಿಡುಗಡೆ ಮಾಡಿದ್ದಾರೆ. ನಮ್ಮದೆ ಸ್ವತ್ತು ಅದು, ನ್ಯಾಯಯುತವಾಗಿ ಹಣ ಕಟ್ಟಿದ್ದೇವೆ. ಕುಮಾರಣ್ಣಗೆ ಬರಬೇಕು. ಆದರೂ ಬೇಕಿದ್ದರೆ ಸಾರ್ವಜನಿಕರಿಗೆ ಬರೆದು ಕೊಟ್ಟುಬಿಡುತ್ತೇವೆ. ದೆಹಲಿಯಲ್ಲಿ ಎಚ್‌ಡಿಕೆ ಇದಕ್ಕೆ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಸೈಟ್ ಖರೀದಿ ಮಾಡಿದಾಗ ಎಚ್‌ಡಿಕೆ ರಾಜಕಾರಣದಲ್ಲಿ ಇರಲಿಲ್ಲ. ಮೈಸೂರಿನಲ್ಲಿ ಒಂದು ಕಚೇರಿ ಇತ್ತು. ಸಿನಿಮಾ ಹಂಚಿಕೆದಾರರಾಗಿ ಅದರಿಂದ ಬಂದಂತಹ ಹಣವನ್ನು ಸಾಮಾನ್ಯ ಪ್ರಜೆಯಾಗಿ ಅರ್ಜಿ ಹಾಕೊಂಡಿದ್ದರು ಎಂದ ಅವರು, ಜಿಲ್ಲಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಇರಲ್ಲವೆಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಎಚ್‌ಡಿಕೆ ಹೆಚ್ಚು ಅಂತರದಲ್ಲಿ ಗೆಲ್ಲುವು ಸಾಧಿಸಿದ್ದಾರೆ. ನನ್ನ ಚುನಾವಣೆಯ ಸೋಲು ಮರೆಯಲು ಸಾಧ್ಯವಿಲ್ಲ. ಭಗವಂತನ ಆಶೀರ್ವಾದ ಎಚ್‌ಡಿಕೆ ಕೇಂದ್ರ ಸಚಿವರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೌರವ ಕೊಟ್ಟಿದ್ದಾರೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಡಾ.ಕೆ.ಅನ್ನದಾನಿ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯರಾದ ಕೆ.ಎಸ್.ವಿಜಯಾನಂದ, ಅಶೋಕ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net