

ಮೈಸೂರು: ರಾಜ್ಯಾದ್ಯಂತ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಕೈಗೊಂಡು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಜಾತ್ಯತೀತ ಜನತಾದಳ ನಗರ ಹಾಗೂ ಜಿಲ್ಲಾ ಘಟಕ ವತಿಯಿಂದ ನಗರದ ಮಂಜುನಾಥಪುರದ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕರ್ತರು ಪಕ್ಷದ ಬೇರುಗಳು ಇದ್ದಂತೆ. ಹೀಗಾಗಿ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಜೆಡಿಎಸ್‌ಗೆ ಸೇರ್ಪಡೆಗೊ ಳಿಸುವ ಕಾರ್ಯ ಆಗಬೇಕು. ಕೇವಲ ಹಳೇ ಮೈಸೂರು ಮಾತ್ರವಲ್ಲದ ರಾಜ್ಯದ ಎಲ್ಲ ಕಡೆಗಳಲ್ಲಿ ಇರುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಲು ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದೇವೆ. ಬೂತ್‌ಮಟ್ಟದಲ್ಲಿ ಪಕ್ಷ ಸದೃಢ ಗೊಳಿಸಬೇಕು. ಪಕ್ಷ ಸದೃಢವಾಗಲು ಕಾರ್ಯಕರ್ತರು ಕಾರಣ. ಬೂತ್‌ನಲ್ಲಿ 25 ರಿಂದ 30 ಸದಸ್ಯರನ್ನು ನೇಮಕಾತಿ ಮಾಡಬೇಕು. ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ಮಾಡಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇರುತ್ತೇವೆ ಎಂದರು.
ಜೆಡಿಎಸ್ ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೇವಲ ಒಂದು ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿಲ್ಲ. ರಾಜ್ಯದ ಎಲ್ಲ ಸಮುದಾಯಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಹೇಳಿದರು.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿರುವುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ವಿಚಾರ. ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಚಿವರಾಗಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಎಚ್.ಡಿ. ದೇವೇಗೌಡ ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಬಿಜೆಪಿಯೊಂದಿಗೆ ಎಂದಿಗೂ ಕೈಜೋಡಿಸಿರಲಿಲ್ಲ. ಆದರೆ, ನರೇಂದ್ರ ಮೋದಿ ದೇಶವನ್ನು ಮುನ್ನಡೆಸುವ ಸಂದರ್ಭ ಹಲವಾರು ಬಾರಿ ದೇವೇಗೌಡರ ಸಲಹೆಗಳನ್ನು ಪಡೆದಿದ್ದಾರೆ. ಈ ಆತ್ಮೀಯತೆಗೆ ಜೆಡಿಎಸ್ -ಬಿಜೆಪಿಯೊಂದಿಗೆ ಕೈ ಜೋಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಈ ಹೊಂದಾಣಿಕೆ ಮುಂಬರುವ ಚುನಾವಣೆಗಳಲ್ಲೂ ಮುಂದುವರೆಯಲಿದ್ದು, ಆ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಾವು ಸದನದ ಒಳಗೆ ಹಾಗೂ ಹೊರಗೆ ಗಟ್ಟಿಯಾಗಿ ಧ್ವನಿ ಎತ್ತಿದ್ದೇವೆ. ಮುಂಬರುವ ದಿನಗಳಲ್ಲೂ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಪಕ್ಷ ಸದೃಢವಾಗಬೇಕಾದರೆ ಸದಸ್ಯತ್ವ ನೋಂದಣಿ ಸರಿಯಾಗಿ ನಡೆಯಬೇಕು. ಆ ಮೂಲಕ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಆಗಬೇಕು. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯದಲ್ಲಿ ಇಂದು ಉಸಿರಾಡುತ್ತಿದ್ದರೆ ಅದಕ್ಕೆ ಕಾರ್ಯಕರ್ತರೇ ಕಾರಣ. ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ವಾರಕ್ಕೆ ಒಂದು ದಿನವನ್ನಾದರೂ ಪಕ್ಷ ಸಂಘಟನೆಗೆ ಮೀಸಲು ಇಡಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಪಕ್ಷದ ಸಂಘಟನೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಮಯ ನೀಡಬೇಕು. ಈ ರೀತಿ ಸಕ್ರಿಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವವರನ್ನು ಪಕ್ಷ ಗುರುತಿಸುವ ಕಾರ್ಯ ಮಾಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸದಸ್ಯ ಶ್ರೀಕಂಠೇಗೌಡ, ಮಾಜಿ ಶಾಸಕರಾದ ಡಾ.ಕೆ. ಅನ್ನದಾನಿ, ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಮಾಜಿ ಮೇಯರ್‌ಗಳಾದ ಆರ್. ಲಿಂಗಪ್ಪ, ಎಂ.ಜೆ. ರವಿಕುಮಾರ್, ನಗರ ಪಾಲಿಕೆ ಸದಸ್ಯರಾದ ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ ಹಾಗೂ ಇತರರು ಇದ್ದರು.