

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣ (ಹಳೇ ಆರ್‌ಎಂಸಿ) ಬಳಿ ಇರುವ ಪಕ್ಷದ ಕಚೇರಿ ಬಳಿ ಕುಮಾರಸ್ವಾಮಿ ಅವರ ಕಟೌಟ್‌ಗೆ ಪುಷ್ಪಾರ್ಚನೆ ಮಾಡಿ ಜಯಘೋಷಣೆ ಕೂಗಿದರು.
ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಮಾತನಾಡಿ, ಜೆಡಿಎಸ್ ಎಲ್ಲಿದೆ?, ದೇವೇಗೌಡರು ಎಲ್ಲಿದ್ದಾರೆ? ಎಂದು ಹೇಳುತ್ತಿದ್ದವರಿಗೆ ಇದೀಗ ಉತ್ತರ ಸಿಕ್ಕಿದೆ. ರಾಜ್ಯದ ಜನರೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಮಾಜಿ ಮೇಯರ್ ಆರ್.ಲಿಂಗಪ್ಪ ಮಾತನಾಡಿ, ಕಾಂಗ್ರೆಸ್‌ನ ಆಸೆ, ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟಾಗಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಮೊದಲು ನಾವು ಕೃತಜ್ಞತೆ ಹೇಳುತ್ತೇವೆ. ಪಕ್ಷಕ್ಕೆ ಈಗ ಇನ್ನೂ ಹೆಚ್ಚಿನ ಬಲ ಬಂದಿದ್ದು, ವಿರೋಧಿಗಳಿಗೆ ಜನರು ತಕ್ಕಪಾಠ ಕಲಿಸಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಎಸ್.ಬಾಲು, ರಮೇಶ್(ರಮಣಿ), ಪ್ರೇಮಾ ಶಂಕರೇಗೌಡ, ಮೈಲ್ಯಾಕ್ ಮಾಜಿ ಅಧ್ಯಕ್ಷ ಕೃಷ್ಣ, ವಕ್ತಾರರಾದ ರವಿಚಂದ್ರೇಗೌಡ, ಎಸ್.ಮಂಜುನಾಥ್ ಇತರರು ಇದ್ದರು.