ಎರಡೂ ವಾರ್ಡ್‌ನಲ್ಲೂ ದಳ ಜಯಭೇರಿ: ರೈತ ಸಂಘ, ಕಾಂಗ್ರೆಸ್‌ಗೆ ಮುಖಭಂಗ

JDS wins municipal by elections mandya
Published on

ಮಂಡ್ಯ: ಪಾಂಡವಪುರ ಪುರಸಭೆಯ ಎರಡು ವಾರ್ಡ್‌ಗೆ ನಡೆದಿದ್ದ ಉಪಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ಕಾಂಗ್ರೆಸ್ ಮತ್ತು ರೈತ ಸಂಘದ ಮೈತ್ರಿಗೆ ಮುಖಭಂಗವಾದಂತಾಗಿದೆ.

2 ಹಾಗೂ 9ನೇ ವಾರ್ಡ್‌ನಲ್ಲಿ ಜೆಡಿಎಸ್ ಸದಸ್ಯರೇ ಆಯ್ಕೆಯಾಗಿದ್ದರು. ಆದರೆ ಸದಸ್ಯರ ಅಕಾಲಿಕ ಮರಣದಿಂದಾಗಿ ಉಪಚುನಾವಣೆ ಎದುರಾಗಿತ್ತು. ಅದರಂತೆ ಡಿ.27ರಂದು ಮತದಾನ ನಡೆದು ಶನಿವಾರ ಫಲಿತಾಂಶ ಪ್ರಕಟವಾಗಿದೆ. 2ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿ ಯಶ್ವಂತ್‌ಕುಮಾರ್ 380 ಮತಗಳನ್ನು ಪಡೆದರೆ, ರೈತಸಂಘದ ಅಭ್ಯರ್ಥಿ ರಾಜೇಂದ್ರ 216 ಮತ ಪಡೆದರು. ಇದರೊಂದಿಗೆ ಯಶ್ವಂತ್‌ಕುಮಾರ್ 176 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಇನ್ನು 9ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜ್ಯೋತಿಲಕ್ಷ್ಮೀ 171, ರೈತಸಂಘದ ಅಭ್ಯರ್ಥಿ ಎಸ್.ರಾಜು 128 ಹಾಗೂ ಬಿಜೆಪಿ ಅಭ್ಯರ್ಥಿ ಸೋಮಶೇಖರ್ 81 ಮತ ಪಡೆದರು. ಜ್ಯೋತಿಲಕ್ಷ್ಮೀ 43 ಮತದ ಅಂತರದಿಂದ ಜಯ ಸಾಧಿಸಿದರು.

ಸಿಎಸ್‌ಪಿಯಿಂದ ಮತದಾರರಿಗೆ ಕೃತಜ್ಞತೆ: ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್ ಸದಸ್ಯರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಎರಡು ವಾರ್ಡ್‌ನಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡೂ ವಾರ್ಡ್ ಮತ್ತೆ ಜೆಡಿಎಸ್ ತೆಕ್ಕೆಗೆ ಬಂದಿದ್ದು, ಇದರೊಂದಿಗೆ ಪುರಸಭೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ 18 ಆಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯರಾದ ಗಿರೀಶ್, ಸೋಮಶೇಖರ್, ಶಿವಕುಮಾರ್, ಚಂದ್ರು ಅರ್ಚನಾ, ಶ್ವೇತಾ, ಮುಖಂಡರಾದ ವೈರಮುಡಿಗೌಡ, ಬಿ.ಎಸ್.ಜಯರಾಮು, ನಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net