ಪರಿಷತ್ ಸೋಲಿನಿಂದ ಕಾಂಗ್ರೆಸ್ ಕಂಗಾಲು: ಅಧಿಕಾರ ಉಳಿಸಿಕೊಂಡ ದಳ, ಅಸ್ಥಿತ್ವ ಕಳೆದುಕೊಂಡ ಗೌಡರು

Political Story Mandya
Published on

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಜಿಲ್ಲಾ ಕಾಂಗ್ರೆಸ್‌ಗೆ ಮೂರೇ ದಿನದ ಅಂತರದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಅತೀವ ನಿರೀಕ್ಷೆ ಹೊಂದಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾದರೆ, ಸತತ ನಾಲ್ಕು ಬಾರಿ ಗೆದ್ದು ದಾಖಲೆ ಬರೆದಿದ್ದ ಮರಿತಿಬ್ಬೇಗೌಡ ಅಸ್ಥಿತ್ವ ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಚುನಾವಣೆಯಲ್ಲಿ ಗೆಲುತ್ತಾ ಬಂದಿದ್ದ ಕಾಂಗ್ರೆಸ್‌ಗೆ ಈ ಬಾರಿ ಸಂಸತ್ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಅದರಲ್ಲಿಯೂ ಮರಿತಿಬ್ಬೇಗೌಡ ಅವರು ಗೆಲುವು ಶತಃ ಸಿದ್ಧ ಎನ್ನುವ ಮಾತುಗಳನ್ನು ನಾಯಕರು ಹೇಳಿಕೊಂಡಿದ್ದರು. ಆದರೆ ಮತ್ತೊಮ್ಮೆ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಹೊಡಿದಿದೆ. ಐದನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದ ಮರಿತಿಬ್ಬೇಗೌಡರಿಗೆ ನಿರೀಕ್ಷೆಗೂ ಮೀರಿದ ಸೋಲು ಎದುರಾಗಿದ್ದು, ಅವರ ಮುಂದಿನ ರಾಜಕೀಯ ಬದುಕಿಗೆ ದೊಡ್ಡ ಹೊಡೆತವನ್ನೇ ನೀಡಿದೆ.
ಮುಳ್ಳಾಯಿತೇ ಅತಿಯಾದ ವಿಶ್ವಾಸ?: ಮರಿತಿಬ್ಬೇಗೌಡ ಸೋಲಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಪ್ರಮುಖವಾಗಿ ಕಾಂಗ್ರೆಸ್‌ನ ಅತಿಯಾದ ವಿಶ್ವಾಸವೇ ಸೋಲಿಗೆ ಮುನ್ನುಡಿ ಬರೆದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಜೆಡಿಎಸ್‌ನಿಂದ ಹೊರಬರುವ ಮುನ್ನವೇ ಮರಿತಿಬ್ಬೇಗೌಡ ಅವರನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಣೆ ಮಾಡಲಾಗಿತ್ತು. ಅವರು ಕೂಡ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಕಾಂಗ್ರೆಸ್‌ಗೆ ಬಂದ ಹುಮ್ಮಸ್ಸಿನಲ್ಲಿ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಹೀನಾಯವಾಗಿ ಟೀಕೆ ಮಾಡಿದ್ದರು. ಅಧಿಕಾರ ಅನುಭವಿಸಿದರ ಹೊರತಾಗಿಯೂ ಜೆಡಿಎಸ್ ವಿರುದ್ಧದ ಮಾತುಗಳು ಮರಿತಿಬ್ಬೇಗೌಡರಿಗೆ ಮುಳುವಾಗಿದೆ.
ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಗಿಯೇ ಭಾಷಣ ಮಾಡುತ್ತಿದ್ದ ಮರಿತಿಬ್ಬೇಗೌಡರ ವರ್ತನೆ ಒಕ್ಕಲಿಗ ಸಮುದಾಯದ ಶಿಕ್ಷಕ ವರ್ಗದಲ್ಲಿ ಅಸಮಾಧಾನ ತರಿಸಿತ್ತು. ಇದರೊಟ್ಟಿಗೆ ಈ ಬಾರಿ ಎನ್‌ಡಿಎ ಕೂಡ ಜೆಡಿಎಸ್‌ನೊಂದಿಗೆ ಸೇರಿದ ಪರಿಣಾಮ ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯದ ಮತಗಳು ಕಾಂಗ್ರೆಸ್‌ನಿಂದ ದೂರಾಯಿತು. ಮಾತ್ರವಲ್ಲದೆ ಚುನಾವಣೆಯಲ್ಲಿ ತಮ್ಮನ್ನು ಕೆಲ ಸಮುದಾಯದ ಶಿಕ್ಷಕರೊಂದಿಗೆ ಗುರುತಿಸಿಕೊಂಡಿದ್ದು ಹಿನ್ನಡೆಗೆ ಕಾರಣವಾಗಿದೆ. ಇನ್ನು ಮರಿತಿಬ್ಬೇಗೌಡ ಅವರನ್ನು ಹಲವು ವರ್ಷದಿಂದ ಬೆಂಬಲಿಸಿಕೊಂಡು ಬಂದಿರುವ ಶಿಕ್ಷಕರ ಪೈಕಿ ಬಹುತೇಕರು ನಿವೃತ್ತಿಯಾದ ಪರಿಣಾಮ ಮತಬ್ಯಾಂಕ್‌ಗೆ ದೊಡ್ಡ ಹೊಡೆತ ನೀಡಿತು.
ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶ ಪಡೆದ ಮರಿತಿಬ್ಬೇಗೌಡ, ಆದರೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿ 2000ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಎಂಎಲ್‌ಸಿ ಆಗಿ ಆಯ್ಕೆಯಾಗುತ್ತಾರೆ. ನಂತರ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಹೊರಬಂದು 2006ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸುತ್ತಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಸೇರ್ಪಡೆಯಾಗುವ ಮರಿತಿಬ್ಬೇಗೌಡ 2012 ಹಾಗೂ 2018ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರು ಆಯ್ಕೆಯಾಗುತ್ತಾರೆ. ಐದನೇ ಬಾರಿಗೂ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಗೌಡರಿಗೆ ಸೋಲು ಎದುರಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ

ನಿರೀಕ್ಷೆ ಮೀರಿದ ವಿವೇಕಾನಂದ
ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಕೆ.ವಿವೇಕಾನಂದ ಅಖಾಡದಲ್ಲಿ ಜೋರಾಗಿಯೇ ಸದ್ದು ಮಾಡುವುದರ ಜತೆಗೆ ಚೊಚ್ಚಲ ಪ್ರಯತ್ನದಲ್ಲೇ ಪರಿಷತ್ ಪ್ರವೇಶಿಸಿದ್ದಾರೆ. ಅದು ಕೂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಮಂಡ್ಯದವರೇ ಎಂಎಲ್‌ಸಿ ಸ್ಥಾನ ಅಲಂಕರಿಸಿರುವುದು ಒಂದೆಡೆಯಾದರೆ, ಹಾಲಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.
ವಿವೇಕಾನಂದ ಅವರಿಗೆ ಸ್ಪರ್ಧೆ ವಿಚಾರದಲ್ಲಿ ಸಾಕಷ್ಟು ವಿರೋಧ ಎದುರಾಗಿತ್ತು. ಬಂಡಾಯವೇಳುವ ಸೂಚನೆ ಮುನ್ನವೇ ಮಾಜಿ ಎಂಎಲ್‌ಸಿಯೂ ಆದ ಪ್ರಬಲ ಸ್ಪರ್ಧಾಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಸಮಾಧಾನಪಡಿಸಲಾಗಿತ್ತು. ಇದಲ್ಲದೆ ಹೆಸರು ಘೋಷಣೆಯಾಗಿ ನಾಮಪತ್ರವನ್ನು ಸಲ್ಲಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅವರ ಮನವೊಲಿಕೆಯೂ ಆಯಿತು. ಆದರೆ ಇದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಆದಾಗ್ಯೂ ಜೆಡಿಎಸ್ ಮತ್ತು ಬಿಜೆಪಿ ನಾಯಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನೊಂದೆಡೆ ವಿವೇಕಾನಂದ ಅವರ ವಿದ್ಯಾಭ್ಯಾಸದ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡಿದ್ದರು. ಜತೆಗೆ ಅಭ್ಯರ್ಥಿಯನ್ನು ಲಘುವಾಗಿ ತೆಗೆದುಕೊಂಡಿತ್ತು. ಆದರೆ ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ವಿರೋಧ ಹಾಗೂ ಟೀಕೆಯ ನಡುವೆ ಗೆಲುವು ಸಾಧಿಸುವಲ್ಲಿ ವಿವೇಕಾನಂದ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ವಿವೇಕಾನಂದ

ಹಿಡಿತ ಕಳೆದುಕೊಂಡ ಕಾಂಗ್ರೆಸ್
2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಿಸಿ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ ಕಾಂಗ್ರೆಸ್, ನಂತರ ಎರಡು ಎಂಎಲ್‌ಸಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ದೊಡ್ಡ ಹೊಡೆತವನ್ನು ನೀಡಿತ್ತು. ಆದರೆ ಕಾಂಗ್ರೆಸ್ ಗೆಲುವಿನ ನಾಗಲೋಟಕ್ಕೆ ಎಚ್.ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಬ್ರೇಕ್ ಹಾಕಿದ್ದಾರೆ. ಇನ್ನು ಪರಿಷತ್ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿಲ್ಲದಿದ್ದರೂ ಈ ಬಾರಿ ವಶಪಡಿಸಿಕೊಳ್ಳುವ ಹುಮ್ಮಸ್ಸಿಗೆ ದಳ ತಣ್ಣೀರೆರೆಚಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಹಿಡಿತ ಕಳೆದುಕೊಳ್ಳುವತ್ತಾ ಸಾಗಿದಂತೆ ಕಂಡುಬರುತ್ತಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆ ಒಳಗೊಂಡಿದೆಯಾದರೂ ಮಂಡ್ಯಕ್ಕೆ ಪ್ರಮುಖವಾಗಿದೆ. ಅದರಲ್ಲಿಯೂ ಕಾಂಗ್ರೆಸ್‌ಗೆ ಮಹತ್ವದ್ದಾಗಿತ್ತು. ಆದರೆ ಪ್ರಚಾರ ಹಾಗೂ ತಂತ್ರಗಾರಿಕೆ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಫಲಿತಾಂಶ ತೋರಿಸಿದೆ. ಮತಯಾಚನೆ ಕೂಡ ಕಾಟಾಚಾರಕ್ಕೆ ನಡೆದಂತಿತ್ತು. ಶಾಸಕರು ಕೂಡ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಸಭೆ ಮಾಡಿದಷ್ಟೇ. ಪರಿಣಾಮ ಮರಿತಿಬ್ಬೇಗೌಡ ಏಕಾಂಗಿಯಾಗಿ ಚುನಾವಣೆ ಎದುರಿಸಿದರು.
ಇದಲ್ಲದೆ ಈ ಚುನಾವಣೆಯನ್ನು ಕಾಂಗ್ರೆಸ್ ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮರಿತಿಬ್ಬೇಗೌಡ ಅವರು ಆಯ್ಕೆಯಾದರೆ ಸಭಾಪತಿ ಹುದ್ದೆ ಸ್ಥಾನ ಕೊಡಬೇಕಾಗಬಹುದು. ಕಾರಣ ಸತತ ಐದನೇ ಬಾರಿ ಆಯ್ಕೆಯಾದರೆ ಹಿರಿತನದ ಆಧಾರದಲ್ಲಿ ಅಧಿಕಾರ ಕೊಡಬಹುದೆನ್ನುವ ಕಾರಣಕ್ಕೆ ನಿರ್ಲಕ್ಷೃ ಮಾಡಿರಬಹುದು ಎನ್ನುವ ಮಾತಿದೆ. ಇನ್ನು ಲೋಕಸಭಾ ಚುನಾವಣೆಯ ಫಲಿತಾಂಶ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿಯೂ ಮರುಕಳಿಸಬಹುದೆನ್ನುವ ಲೆಕ್ಕಾಚಾರವನ್ನು ಮರಿತಿಬ್ಬೇಗೌಡ ಅವರೊಂದಿಗಿರುವವರೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಭಾರೀ ನಿರೀಕ್ಷೆ ಹುಸಿಯಾಗುವುದರ ಜತೆಗೆ 24 ವರ್ಷದ ಮರಿತಿಬ್ಬೇಗೌಡ ಅವರ ಅಧಿಕಾರಕ್ಕೆ ದೊಡ್ಡ ಬ್ರೇಕ್ ಸಿಕ್ಕಿದೆ. ಮುಂದಿನ ದಿನದಲ್ಲಿ ರಾಜಕೀಯವಾಗಿ ಏನೆಲ್ಲ ಬೆಳವಣಿಗೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net