ಜೆಡಿಎಸ್ ಅನ್ನು ಬಕಾಸುರ ಪಕ್ಷ ಬಿಜೆಪಿ ನುಂಗಲಿದೆ..

Madhu Bangarappa
Published on

ಶಿರಸಿ: ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು ಜರಿದಿದ್ದ ಎಚ್.ಡಿ. ಕುಮಾರಸ್ವಾಮಿ ಈಗ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಟಿಕೆಟ್ ಪಡೆಯಲು ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ತತ್ವ, ಸಿದ್ಧಾಂತಗಳೇ ಇಲ್ಲ. ಬಿಜೆಪಿ ಬಕಾಸುರ ಪಕ್ಷವಾಗಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಅನ್ನು ನುಂಗಲಿದೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡು ತಮ್ಮ ಹಗರಣಗಳನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಅವರ ಪಕ್ಷದವರೇ ಆದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ ನೇತೃತ್ವದಲ್ಲಿ ತಯಾರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಿ.ಪಿ. ಯೋಗೇಶ್ವರ ಕಾಂಗ್ರೆಸ್ ಸೇರುತ್ತಾರೆ ಎಂಬುದು ಮೊದಲೇ ಗೊತ್ತಿತ್ತು. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ, ಉಳಿದ ಎರಡು ಕಡೆಗಳಲ್ಲಿ ಉತ್ತಮ ವಾತಾವರಣವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹಾಗೂ ಉಳಿದ ಸಚಿವರ ಪ್ರಯತ್ನದಲ್ಲಿ ಚನ್ನಪಟ್ಟಣವನ್ನು ಕಾಂಗ್ರೆಸ್ ಗೆಲ್ಲಲಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಬಂಡಾಯ ಶಮನವಾಗುತ್ತದೆ ಎಂದರು.

ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಾಯದಿಂದ ವಾರದಲ್ಲಿ 6 ದಿನ ಮೊಟ್ಟೆ ಅಥವಾ ಚಿಕ್ಕಿ ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಸಂವಿಧಾನ ಪೀಠಿಕೆ ಅಭ್ಯಾಸ ಮಾಡಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಪಠ್ಯಪುಸ್ತಕದಲ್ಲಿ ಅನಗತ್ಯ ವಿಷಯಗಳನ್ನು ಹಾಕಿದ್ದರು. ಮೂರುವರೆ ವರ್ಷದ ಅಧಿಕಾರ ನಡೆಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 4568 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ತಿಂಗಳೊಳಗೆ 13,500 ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಹಣವಿರಲಿಲ್ಲ. ಈ ಕಾರಣದಿಂದ ಎಲ್ಲ ಸರ್ಕಾರಿ ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಮಾಡಿದ್ದೇವೆ ಎಂದರು.

ಹೆಬ್ಬಾರ ಬರದೇ ತಪ್ಪು ಮಾಡುತ್ತಿದ್ದಾರೆ !

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮೂಲ ಕಾಂಗ್ರೆಸ್​ನವರು. ಅವರು ಮತ್ತೆ ಕಾಂಗ್ರೆಸ್​ಗೆ ಬಂದೇ ಬರುತ್ತಾರೆ. ಅವರೇ ಪಕ್ಷಕ್ಕೆ ಸೇರ್ಪಡೆಗೊಳ್ಳದೇ ತಪ್ಪು ಮಾಡುತ್ತಿದ್ದಾರೆ. ತ್ವರಿತವಾಗಿ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಬೇಕು ಎಂದರು. ಅವರು ಬಂದರೆ ಬರಲಿ. ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಸೇರ್ಪಡೆಗೊಂಡ ಎಲ್ಲ ಶಾಸಕರು ಪುನಃ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ನೇರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹಣದಿಂದ ಶಾಸಕರನ್ನು ಖರೀದಿ ಮಾಡಿಯೇ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ದೊಡ್ಡ ಕಳ್ಳರು ಎಂದು ವಾಗ್ದಾಳಿ ನಡೆಸಿದರು.

ಶರಾವತಿ ಭಾಗದ ಜನರು ರಾಜ್ಯಕ್ಕೆ ಬೆಳಕು ನೀಡಿದ್ದಾರೆ. ಆದರೆ, ಶರಾವತಿ ಸಂತ್ರಸ್ತರು ಕತ್ತಲೆಯಲ್ಲಿದ್ದಾರೆ. ಅವರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಶರಾವತಿ ನೀರು ಶಿರಸಿ, ಸಿದ್ದಾಪುರ, ಸೊರಬ, ಜಡೆ ಭಾಗಕ್ಕೆ ನೀಡಬೇಕು ಎಂಬ ಪ್ರಸ್ತಾವನೆ ಇದೆ. ಸ್ಥಳೀಯ ಜನರಿಗೆ ಮೊದಲು ನೀರು ನೀಡಬೇಕು. ಆಮೇಲೆ ಬೇರೆ ಕಡೆ ತೆಗೆದುಕೊಂಡು ಹೋಗುವುದು. ಇನ್ನೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಬೆಂಗಳೂರಿಗೆ ಕಾವೇರಿ ನೀರು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕುಡಿಯುವ ನೀರಿನ ಯೋಜನೆಗೆ ವಿರೋಧ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಪರೀಕ್ಷಾ ಶುದ್ಧೀಕರಣ ಮಾಡಿದ್ದೇವೆ. ವಿದ್ಯಾಭ್ಯಾಸಕ್ಕಾಗಿ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಬೇಲೆಕೇರಿ ಅದಿರು ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾನೂನಿಗೆ ತಲೆಬಾಗುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾನೂನು ಹೋರಾಟದಲ್ಲಿ ಸತೀಶ ಸೈಲ್​ಗೆ ಗೆಲುವು ಸಾಧ್ಯವಾಗುತ್ತದೆ ಎಂದರು.

ಶಾಸಕ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಜ್ಯೋತಿ ಗೌಡ ಪಾಟೀಲ, ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ ಇತರರಿದ್ದರು.

ಅಡಕೆ ಬೆಳೆಯಲ್ಲಿ ಹಾನಿ ಅನುಭವಿಸಿದವರಿಗೆ ಪರಿಹಾರ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಕೊಳೆ, ಎಲೆಚುಕ್ಕೆ ರೋಗಕ್ಕೆ ಪರಿಹಾರ ನೀಡಲು ವಿಜ್ಞಾನಗಳ ಸಲಹೆ ಪಡೆದು, ಕ್ಯಾಬಿನೆಟ್​ನಲ್ಲಿ ಪ್ರಸ್ತಾಪಿಸುತ್ತೇನೆ. ಮಧು ಬಂಗಾರಪ್ಪ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net