

ತುಮಕೂರು: ‘ನಾನು ಈಗಲೂ ಜೆಡಿಎಸ್‌ನಲ್ಲಿದ್ದೇನೆ. ಜೆಡಿಎಸ್ ಹುಟ್ಟಿರುವುದೇ ಜಗಳಗಳಿಂದ. ನನಗೆ ದೇವೇಗೌಡರೇ ನಾಯಕರು. ಆದರೆ ಇನ್ನೂ ಎರಡೂವರೆ ವರ್ಷ ನಿರ್ಲಿಪ್ತನಾಗಿರುವೆ. ನಂತರ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಗುಬ್ಬಿ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ಬಹುತೇಕ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಎಸ್.ಆರ್.ಶ್ರೀನಿವಾಸ್ ಈ ಮಾತುಗಳನ್ನು ಹೇಳಿದ್ದು ಕಾಂಗ್ರೆಸ್ ಧುರೀಣ, ಮಾಜಿ ಶಾಸಕ ಕೆ. ಎನ್. ರಾಜಣ್ಣ ಅವರ ನಿವಾಸದಲ್ಲಿ ಭಾನುವಾರ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ.
ಮಧ್ಯಂತರ ಚುನಾವಣೆ ಬರೋಲ್ಲ !: ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಬಿಜೆಪಿಗೆ ನಮ್ಮ ನಾಯಕರು ಈಗಾಗಲೇ ಬೆಂಬಲವಾಗಿ ನಿಂತು ಬಿಟ್ಟಿದ್ದಾರೆ. ಬಿಜೆಪಿ ಜತೆ ಕೈಜೋಡಿಸಿರುವ ಬಗ್ಗೆ ನನಗೂ ಅಸಮಾಧಾನ ಇದೆ. ಇದು ಹಲವರು ಪಕ್ಷ ತೊರೆಯಲು ಕಾರಣವಾಗಲಿದೆ ಎಂದು ಬಿಜೆಪಿ ಬೆಂಬಲಿಸುತ್ತಿರುವ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನವನ್ನೂ ಅವರು ಹೊರಹಾಕಿದರು.
ಬಾಂಡ್ ಪೇಪರ್ ಸಂಸ್ಕೃತಿ ಆರಂಭ ಯಾವಾಗ?: ಕೆ. ಎನ್. ರಾಜಣ್ಣ ಮಾತನಾಡಿ, 2004ರಲ್ಲಿ ಎಚ್ಡಿಕೆ, ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡು 20 ತಿಂಗಳು ಅಧಿಕಾರ ಅನುಭವಿಸಿದ ಬಳಿಕ ಅವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಆ ಸಂದರ್ಭದಲ್ಲಿ ನಾವು ಕುಮಾರಸ್ವಾಮಿ ಅವರೊಂದಿಗೆ ಇದ್ದವರು. ವಚನ ಭ್ರಷ್ಟತೆ, ಬಾಂಡ್ ಪೇಪರ್ ಸಂಸ್ಕೃತಿ ಎಲ್ಲಿಂದ ಪ್ರಾರಂಭವಾಯಿತು ಎನ್ನುವುದು ಜನರಿಗೆ ಗೊತ್ತಿದೆ. ರಾಜಕಾರಣದಲ್ಲಿ ನಿರಂತರವಾಗಿ ನಡೆಯುವ ಇಂತಹ ಪ್ರಕ್ರಿಯೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.
ಸೋಲು ಅನಾಥ, ಗೆಲುವಿಗೆ ಹಲವು ಅಪ್ಪಂದಿರು. ಅದೇ ರೀತಿ ಚುನಾವಣೆಯಲ್ಲಿ ಯಾರೋ ಒಬ್ಬರನ್ನು ದೂಷಣೆ ಮಾಡುವುದು ಸರಿಯಲ್ಲ. ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಅವರನ್ನು ಬೊಟ್ಟು ಮಾಡುವುದು ಸರಿಯಲ್ಲ. ಚಾಮುಂಡೇಶ್ವರಿಯಲ್ಲಿ ಗೋಪಾಲಯ್ಯ ಅನ್ನುವವರಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದ್ದು ಯಾರು ಎಂದು ಕುಮಾರಸ್ವಾಮಿ ಎದೆಮುಟ್ಟಿಕೊಂಡು ಹೇಳಲಿ ಎಂದು ಕೆಎನ್ನಾರ್ ಸವಾಲು ಹಾಕಿದರು.
ಗೋ ಹತ್ಯೆ ಮಸೂದೆ ಸೇರಿ ಹಲವು ಯೋಜನೆಗಳನ್ನು ಹೊರಗೆ ವಿರೋಧಿಸಿ ಒಳಗೆ ಬೆಂಬಲಿಸುವ ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ದೇವೇಗೌಡರ ಹೋರಾಟದ ಬಗ್ಗೆ ಗೌರವ ಇದೆ. ಆದರೆ, ಅವರ ದ್ವಂದ್ವ ನಿಲುವಿನ ಬಗ್ಗೆ ಅಸಮಾಧಾನ ಇದೆ ಎಂದು ಹರಿಹಾಯ್ದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆಯುವವರು ಇದ್ದಾರೆ. ಅದೇ ರೀತಿ ಪಕ್ಷ ಸೇರುವವರೂ ಇದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಶಕ್ತಿ ಇದ್ದಂತೆ. ಅವರ ನೇತೃತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ನನ್ನನ್ನು ಒಮ್ಮೆ ದೇವೇಗೌಡರು ಶಾಸಕರನ್ನಾಗಿ ಮಾಡಿದ್ದರು. ಅವರನ್ನು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ ಋಣತೀರಿಸುವ ಆಸೆ ಇತ್ತು. ಆದರೆ, ಅವರು ಒಮ್ಮೆಯೂ ನನ್ನ ಬೆಂಬಲ ಕೋರಲಿಲ್ಲ. ಕೆ.ಎನ್.ರಾಜಣ್ಣ, ಮಾಜಿ ಶಾಸಕ