ಕಾರ್ಯಕ್ರಮದ ಯಶಸ್ಸು ಕಂಡು ಜೆಡಿಎಸ್ ದಿಗ್ಭ್ರಮೆ: ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್ ಟಾಂಗ್

Bjp Press Meet
Published on

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದಲ್ಲಿ ಜು.21ರಂದು ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕೋಟ್ಯಂತರ ರೂ ವೆಚ್ಚದ ಕಾಮಗಾರಿಗೆ ಚಾಲನೆ ಹಾಗೂ ಸೌಲಭ್ಯ ವಿತರಣೆ ಸಮಾರಂಭದ ಯಶಸ್ಸು ಜೆಡಿಎಸ್ ನಾಯಕರಿಗೆ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್ ಟಾಂಗ್ ನೀಡಿದರು.

ಅಂದಿನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು. ಆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷದ ಮುಖಂಡರಿಗೆ ದಿಗ್ಬ್ರಮೆಯಿಂದ ನಿದ್ರೆ ಬಾರದೆ, ಹೊಟ್ಟೆಕಿಚ್ಚಿನಿಂದ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ನಾಡಿನ ದೊರೆ ತಾಲೂಕಿಗೆ ಆಗಮಿಸುವ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಪಟ್ಟಣವನ್ನು ಸ್ವಚ್ಛಗೊಳಿಸುವ, ಅಲಂಕಾರ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ, ಪುರಸಭಾ ಕಾರ್ಯಾಲಯದಿಂದ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಯಾವುದೇ ಪಕ್ಷದ ಶಾಸಕರಿರಲಿ ರಾಜ್ಯದ ಮುಖ್ಯಮಂತ್ರಿಗೆ ಸ್ವಾಗತಿಸುವ ಸಲುವಾಗಿ ಇದೊಂದು ಸಹಜ ಪ್ರಕ್ರಿಯೆ. ಇದನ್ನು ವಿರೋಧ ಮಾಡುತ್ತಿರುವುದು ಘನತೆಗೆ ಶೋಭೆ ತರುವುದಿಲ್ಲ. ಅದೊಂದು ಐತಿಹಾಸಿಕ ಕಾರ್ಯಕ್ರಮ. ಆದ್ದರಿಂದ ಮೊಸರಲ್ಲಿ ಕಲ್ಲು ಹುಡುಕುವುದು, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ನೋಡಿ ಟೀಕೆ ಮಾಡುವುದನ್ನು ಮೊದಲು ಬಿಡಿ ಎಂದರು.

ಬಿಜೆಪಿ ಮುಖಂಡ ಬೂಕನಕೆರೆ ಜವರಾಯಿಗೌಡ, ಮನ್ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾಲೂಕು ಅಧ್ಯಕ್ಷ ಪರಮೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ಡಿ.ಪಿ.ಪರಮೇಶ್, ಮಂಜುನಾಥ್, ಲೋಕೇಶ್, ಕೆ.ಆರ್.ನೀಲಕಂಠ,ನಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net