ಮೆಸ್ಕಾಂ ವಿರುದ್ಧ ಬೀದಿಗಿಳಿದ ಜೆಡಿಎಸ್

18bdvt2
ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಭದ್ರಾವತಿ ಜೆಪಿಎಸ್ ಕಾಲನಿ ಮೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತಗೆ ಶನಿವಾರ ಜೆಡಿಎಸ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ, ಆರ್.ಕರುಣಾಮೂರ್ತಿ, ಗೊಂದಿ ಜಯರಾಂ, ತಿಮ್ಮೇಗೌಡ ಇದ್ದರು.
Published on

ಭದ್ರಾವತಿ: ಕೆಪಿಟಿಸಿಎಲ್ ನೌಕರರ ಸಂಘದ ತಾಲೂಕು ಅಧ್ಯಕ್ಷರನ್ನು ಮೆಸ್ಕಾಂ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ವಿನಾಕಾರಣ ನಿರಂತರವಾಗಿ ವರ್ಗಾವಣೆ ಮಾಡುತ್ತಿದೆ. ಅನೇಕರನನ್ನು ಅಮಾನತು ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಅಸಮಾಧಾನ ವ್ಯಕ್ತಪಡಿಸಿದರು.

ಜೆಪಿಎಸ್ ಕಾಲನಿ ಮೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತ ಕಚೇರಿ ಎದುರು ಶನಿವಾರ ಜೆಡಿಎಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನೌಕರರಿಗೆ ಕಿರಕುಳ ನೀಡುವುದನ್ನು ಜೆಡಿಎಸ್ ಖಂಡಿಸುವ ಜತೆಯಲ್ಲಿ ಮುಂದೆ ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
1997ರಿಂದ ಗುತ್ತಿಗೆ ನೌಕರ ಹಾಗೂ 2008ರಿಂದ ಕಾಯಂ ನೌಕರನಾಗಿ ನೇಮಕಗೊಂಡು ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಕೆಪಿಟಿಸಿಎಲ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಆನಂದ್ ಯಾವುದೇ ರೀತಿ ಭ್ರಷ್ಟಾಚಾರ, ಕರ್ತವ್ಯಲೋಪ ಎಸಗದಿದ್ದರೂ ರಾಜಕೀಯ ಪ್ರಭಾವಕ್ಕೆ ಮಣಿದು ದುರುದ್ದೇಶದಿಂದ ಒಂದು ವರ್ಷದೊಳಗೆ ಐದು ಬಾರಿ ವರ್ಗಾವಣೆ ಮಾಡಲಾಗಿದೆ. ನಿಯಮ ಉಲ್ಲಂಸಿ ಹೊರ ಜಿಲ್ಲೆಗಳಿಗೂ ವರ್ಗಾಯಿಸಲಾಗಿದೆ. ಸುಳ್ಳು ಮೊಕದ್ದಮೆ ದಾಖಲಿಸಿ ಭಯದ ವಾತಾವರಣ ನಿರ್ಮಿಸುವ ಮೂಲಕ ನೌಕರ ವರ್ಗದ ನೈತಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಮಾನತು ಆದೇಶ ಹಿಂಪಡೆದು ನಗರ ಉಪ ವಿಭಾಗ ವ್ಯಾಪ್ತಿಯಲ್ಲಿಯೇ ನೌಕರ ಆನಂದ್ ಅವರನ್ನು ಮುಂದುವರೆಸಬೇಕು. ಇಲ್ಲದಿದ್ದರೆ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾರ್ಯಪಾಲಕ ಅಭಿಯಂತಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ನಗರ ಅಧ್ಯಕ್ಷ ಆರ್.ಕರುಣಾಮೂರ್ತಿ, ಪ್ರಮುಖರಾದ ಗೊಂದಿ ಜಯರಾಂ, ತಿಮ್ಮೇಗೌಡ, ರಾಮಕೃಷ್ಣ, ಎಂ.ಎ.ಅಜಿತ್, ಉದಯಕುಮಾರ್, ಉಮೇಶ್, ಮಧುಸೂಧನ್, ಭಾಗ್ಯಮ್ಮ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net