ಬಿಜೆಪಿ, ಕಾಂಗ್ರೆಸ್‌ನ ಕುತಂತ್ರದಿಂದ ನನ್ನ ಸೋಲು: ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್‌ಗೌಡ ಆರೋಪ

2
Published on

ನಾಗಮಂಗಲ: ಬಿಜೆಪಿ ಮತ್ತು ಕಾಂಗ್ರೆಸ್ ಬದ್ಧ್ದ ವೈರಿಗಳಾಗಿದ್ದರೂ ಜಿಲ್ಲೆಯಲ್ಲಿ ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ತಾಲೂಕಿನಲ್ಲಿ ಹೊಂದಾಣಿಕೆಯಾಗಿ ಕುತಂತ್ರದಿಂದ ನನ್ನನ್ನು ಸೋಲಿಸಲಾಗಿದೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು.

ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನತೆ ನೀಡಿದ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ. ನನ್ನ ಸೋಲಿಗೆ ಕೆಲವು ಸುದಾಯದ ಮತಗಳು ಒಂದು ಪಕ್ಷಕ್ಕೆ ಹೋಗಿರುವುದು ನನ್ನ ಸೋಲಿಗೆ ಪ್ರಮುಖ ಕಾರಣವಾಗಿದೆ. 150 ಮತಗಟ್ಟೆಗಳಲ್ಲಿ ನನಗೆ ವಿರೋಧಿ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ನೀಡಿದ್ದರು ಕೂಡ ಆ ಪ್ರಮಾಣ ಕಡಿಮೆಯಾಗಿದೆ. ಆದರೆ ಪಟ್ಟಣದಲ್ಲಿ ನನಗೆ ಕೆಲವು ಮತಗಟ್ಟೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡಿದ್ದಾರೆ ಎಂದರು.

ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ನ ಪೊಳ್ಳು ಭರವಸೆಗಳಿಗೆ ಜನತೆ ಮಾರುಹೋಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಜೆಡಿಎಸ್ ಅಲ್ಪ ಸಂಖ್ಯೆಗೆ ಕುಸಿದಿದೆ. ನನ್ನನ್ನು ಸೋಲಿಸಲು ತಾಲೂಕಿನಲ್ಲಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಇತರ ಅನೇಕರು ಒಂದಾಗಿ ಷಡ್ಯಂತ್ರ ರೂಪಿಸಿದ್ದರು. ದೇವರು ಅವರಿಗೆ ಒಳ್ಳೆಯದು ಮಾಡಲಿ. ನಾನು ಸೋತಿದ್ದರು ಕೂಡ ಒಂದು ದಿನವೂ ತಾಲೂಕಿನಿಂದ ಹೊರಹೋಗದೆ ಫಲಿತಾಂಶ ಬಂದ ದಿನದಿಂದಲೇ ಜನತೆಯ ಕಷ್ಟ ಸುಖಗಳಲ್ಲಿ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಜನಪರವಾದ ಕೆಲಸ ನಿರಂತರವಾಗಿರುತ್ತದೆಯೇ ಹೊರತು ಅದನ್ನು ನಿಲ್ಲಿಸುವ ಮಾತಿಲ್ಲ. ಬೇರೆಯವರ ರೀತಿ ಸೋತ ತಕ್ಷಣ ತಾಲೂಕಿಗೆ ಕಾಲಿಡದೆ ದೂರ ಹೋಗುವ ಜಾಯಮಾನ ನನ್ನದಲ್ಲ ಎಂದರು.

ತಾಲೂಕಿನಲ್ಲಿ ಬಿಜೆಪಿ ಇಲ್ಲವಾಗಿದ್ದು, ಅವರು ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನನ್ನನ್ನು ಸೋಲಿಸಲು. ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದೆ ನನ್ನನ್ನು ಸೋಲಿಸುವುದಕ್ಕಾಗಿಯೇ ಹೊರತು ಅವರು ಗೆಲ್ಲುವುದಕ್ಕಲ್ಲ. ಇಬ್ಬರು ಸೇರಿಕೊಂಡು ಕೆಲವು ಷಡ್ಯಂತ್ರಗಳನ್ನು ಮಾಡಿಕೊಂಡು ಸ್ಪರ್ಧೆ ಮಾಡಿದ್ದರು. ಆದರೂ ನನಗೆ ಜನತೆ ಬೆಂಬಲ ನೀಡಿದ್ದು ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net