ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ, ಅನಿರ್ದಿಷ್ಟಾವಧಿ ಧರಣಿಗೆ ಜೆಡಿಎಸ್ ಬೆಂಬಲ

JDS SUPPORT MEDICAL COLLEGE PROTEST
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿದರು. ಸಂಜೀವ ಹಿರೇಮಠ, ಪೀರಪಾಷಾ ಗಚ್ಚಿನಮಹಲ್, ನಿಂಗನಗೌಡ ಸೋಲಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣಕ್ಕೆ ಆಗ್ರಹಿಸಿ ಮತ್ತು ಪಿಪಿಪಿ ಮಾದರಿಯನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಗುರುವಾರ ಜೆಡಿಎಸ್ ಜಿಲ್ಲಾ ಘಟಕದಿಂದ ಬೆಂಬಲ ಸೂಚಿಸಲಾಯಿತು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ನಿರ್ಮಾಣವಾಗಬೇಕೆಂಬ ಬೇಡಿಕೆ ನ್ಯಾಯೋಚಿತವಾಗಿದೆ. ಜನರ ಮತ ಪಡೆದು ಸರ್ಕಾರಿ ವ್ಯವಸ್ಥೆಯನ್ನು ಸುಧಾರಿಸಬೇಕಾದ, ಬಲಪಡಿಸಬೇಕಾದ ರಾಜಕಾರಣಿಗಳು ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಸರ್ಕಾರಿ ವ್ಯವಸ್ಥೆಯ ಸುಧಾರಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಯೋಜನೆ, ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಬೇಕಾದ ಸರ್ಕಾರಗಳು ಒಂದೊಂದೇ ಸರ್ಕಾರಿ ಅಂಗಗಳನ್ನು ಮಾರಿಕೊಳ್ಳುತ್ತಿರುವುದು ಬಂಡವಾಳಶಾಹಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇಂಥ ಸರ್ಕಾರಗಳಿಂದ ಅಭಿವೃದ್ಧಿ, ಜನರ ಕಲ್ಯಾಣ ನಿರೀಕ್ಷಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜು ಆಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಬಳಿ ನಿಯೋಗ ಕರೆದುಕೊಂಡು ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದ ಮಾಡಗಿ ಅವರು, ಈ ಹೋರಾಟ ರಾಜ್ಯಮಟ್ಟದಲ್ಲಿ ಹರಡುವಂತೆ ಯೋಜನೆ ರೂಪಿಸಬೇಕಾಗಿದೆ. ಈ ಸರ್ಕಾರಕ್ಕೆ ಕಿವಿ ಕಣ್ಣು ಬಾಯಿ ಇಲ್ಲವೇ ಇಲ್ಲ. ನಮ್ಮ ಜಿಲ್ಲೆಯ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಸಂಜೀವ ಹಿರೇಮಠ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಪೀರಪಾಷಾ ಗಚ್ಚಿನಮಹಲ್, ತಾಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ, ನಗರ ಅಧ್ಯಕ್ಷ ಪ್ರಶಾಂತ ಕಿಣಗಿ, ಎಸ್‌ಸಿ ಘಟಕದ ಅಧ್ಯಕ್ಷ ಹರೀಶ ನಾಯಕ, ಮುಖಂಡರಾದ ರವಿ ಚವ್ಹಾಣ, ಸಂತೋಷ ಬಿರಾದಾರ, ಲಕ್ಷ್ಮಣ ಹಿಪ್ಪರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net