

ತಿ.ನರಸೀಪುರ: ತಾಲೂಕಿನ ದೊಡ್ಡೇಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾನುವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದು, 12 ಸ್ಥಾನಗಳ ಪೈಕಿ 10 ಮಂದಿ ನಿರ್ದೇಶಕರು ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಸಾಲಗಾರರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹದೇವಯ್ಯ, ಸಾಮಾನ್ಯ ಕ್ಷೇತ್ರದಿಂದ ಡಿ.ಪಿ.ನಾಗರಾಜು, ಅಕ್ಬರ್ ಪಾಷ, ಮಹದೇವಮ್ಮ, ಬಸವರಾಜು, ಪರಿಶಿಷ್ಟ ಪಂಗಡದ ಜವರನಾಯ್ಕ, ಹಿಂದುಳಿದ ವರ್ಗಗಳ ಪ್ರವರ್ಗ ’ಎ’ ಯಿಂದ ಕೆ.ಮರಿಸ್ವಾಮಿ, ಮಹಿಳೆ ಮೀಸಲಾತಿಯಡಿ ಪುಟ್ಟತಾಯಮ್ಮ, ಮರಿತಾಯಮ್ಮ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿ ರಾಜಮ್ಮ ಚುನಾವಣೆಯಲ್ಲಿ ಜಯಗಳಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಮಹದೇವಸ್ವಾಮಿ ಆಯ್ಕೆಯಾದರೆ, ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್‌ನ ಚಿಕ್ಕತಾಯಮ್ಮ ಅವಿರೋಧವಾಗಿ ಆಯ್ಕೆಯಾದರು. ಬೆಳಗ್ಗೆ 10ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ವರೆಗೂ ನಡೆಯಿತು. ಸಾಲಗಾರರ ಕ್ಷೇತ್ರದಿಂದ 260 ಮತಗಳ ಪೈಕಿ 248 ಮತಗಳು ಚಲಾವಣೆಗೊಂಡರೆ, ಸಾಲಗಾರರಲ್ಲದ ಕ್ಷೇತ್ರದ 54 ಮತಗಳ ಪೈಕಿ 53 ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿದ್ದ ಧನಲಕ್ಷ್ಮೀ ಫಲಿತಾಂಶ ಪ್ರಕಟಿಸಿದರು.
ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸಹಕಾರ ಸಂಘದ ಮುಂದೆ ಜಮಾಯಿಸಿದ್ದ ನೂತನ ನಿರ್ದೇಶಕರ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕಳೆದ ಬಾರಿ ಸಹ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿ ಸಹಕಾರ ಸಂಘದ ಅಧಿಕಾರ ಹಿಡಿದಿದ್ದರು. ಈ ಬಾರಿ ಜೆಡಿಎಸ್ ಬೆಂಬಲಿತರಿಗೆ ಸೋಲುಣಿಸಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಹೆಣೆದಿದ್ದ ಕಾರ್ಯತಂತ್ರ ಫಲ ನೀಡದೆ ಕೇವಲ 2 ಸ್ಥಾನ ಗಳಿಸುವಲ್ಲಿ ತೃಪ್ತಿ ಪಟ್ಟುಕೊಳ್ಳುವಂತಾಯಿತು.
ತಾಲೂಕು ಉಪ್ಪಾರ ಜನಕಲ್ಯಾಣ ಟ್ರಸ್ಟ್ ಗೌರವಾಧ್ಯಕ್ಷ ರಾಮಶೆಟ್ಟಿ, ಜೆಡಿಎಸ್ ಹೋಬಳಿ ಅಧ್ಯಕ್ಷ ಎಚ್.ಎನ್.ಧರ್ಮರತ್ನಕುಮಾರ್, ಸೋಸಲೆ ರಾಜಣ್ಣ, ಪುಟ್ಟಮಲ್ಲಯ್ಯ, ಗ್ರಾಪಂ ಸದಸ್ಯರಾದ ಮುದ್ದುಸ್ವಾಮಿ, ಕುಮಾರಸ್ವಾಮಿ, ಮೋಳೆರಮೇಶ್, ಮುಖಂಡರಾದ ಸಿದ್ದಾಚಾರ್, ಹಲವಾರು ಸಿದ್ದರಾಜು, ಕೆ.ಟಿ. ಸ್ವಾಮಿ, ನಾಗೇಗೌಡ, ನಂಜುಂಡ ನಾಯಕ, ಮಹದೇವ ಶೆಟ್ಟಿ, ರಾಜು, ನಿಂಗರಾಜು, ಬಸವರಾಜ್, ರಾಚಶೆಟ್ಟಿ, ಶ್ರೀನಿವಾಸ, ಆಂಜನೇಯ, ಟೈಲರ್ ಸಿದ್ದರಾಜು, ಜೋಗಿ, ಮಹೇಶ್, ಜವರಶೆಟ್ಟಿ, ಗೋವಿಂದ, ಸುರೇಶ, ಪ್ರಭುಸ್ವಾಮಿ, ನಂಜುಂಡಶೆಟ್ಟಿ, ನಾಗರಾಜು, ಮಂಜು, ರುದ್ರಸ್ವಾಮಿ ಇದ್ದರು.