

ಶಿವಮೊಗ್ಗ: ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸ್ಥಳೀಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ರಾಘವೇಂದ್ರ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವರ್ತನೆಯೇ ಆ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಗಲಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ‌್ಯಾನಾಯ್ಕಾ ಮೈತ್ರಿ ಅಭ್ಯರ್ಥಿ ಪರವಾಗಿ ಸಮರ್ಪಕ ಕೆಲಸ ಮಾಡಿಲ್ಲ ಎಂಬುದು ಕಾಂಗ್ರೆಸ್‌ನವರು ಹಬ್ಬಿಸಿರುವ ವದಂತಿ ಎಂದರು.
ಜನರು ಸಂಭ್ರಮದಿಂದ ಚುನಾವಣೆಯಲ್ಲಿ ಭಾಗವಹಿಸಿದ ಕಾರಣ ಉತ್ತಮ ಮತದಾನವಾಗಿದೆ. ರಾಷ್ಟ್ರಭಕ್ತರ ಸಂಘಟನೆಯ ಅಭ್ಯರ್ಥಿಯಿಂದ ಮೈತ್ರಿ ಅಭ್ಯರ್ಥಿ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ. ಶಿವಮೊಗ್ಗದ ಎಲ್ಲ ಬೂತ್‌ಗಳ ಹೊರಗೂ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರಿದ್ದರು. ಇದು ಸರಳ ವಿಷಯವಲ್ಲ ಎಂದು ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸಿದ್ದಪ್ಪ, ಪಾಲಿಕೆ ಮಾಜಿ ಸದಸ್ಯ ಮಂಜುನಾಥ್, ಪ್ರಮುಖರಾದ ವೆಂಕಟೇಶ್, ತ್ಯಾಗರಾಜ್ ಇತರರಿದ್ದರು.