

ಅಳವಂಡಿ: ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅಳವಂಡಿ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ದೂರಿದರು.
ಅಳವಂಡಿ ವಲಯದಲ್ಲಿ ಹಾಳಾದ ಕಂಪ್ಲಿ-ಬೆಳಗಟ್ಟಿ ರಸ್ತೆ, ಮುಂಗಾರು ಮಳೆಯಾಗದೇ ಸಂಪೂರ್ಣವಾಗಿ ಹಾಳಾದ ಬೆಳೆಗಳ ಸಮೀಕ್ಷೆ, ಕಂಪ್ಲಿ-ಅಳವಂಡಿ ನಡುವಿನ ಹಿರೇಹಳ್ಳ ಹಾಗೂ ನಿಲೋಗಿಪುರ ರಸ್ತೆಯಲ್ಲಿ ಅಪೂರ್ಣಗೊಂಡ ಸೇತುವೆ, ಸಿಂಗಟಾಲೂರ ಏತ ನೀರಾವರಿ ಯೋಜನೆ ಕಾಲುವೆ ಕಾಮಗಾರಿ ಸೇರಿ ಮುಂತಾದವುಗಳನ್ನು ಗುರುವಾರ ಖುದ್ದು ವೀಕ್ಷಿಸಿ ಮಾತನಾಡಿದರು.
ಕಂಪ್ಲಿ-ಅಳವಂಡಿ ಮದ್ಯದ ಹಿರೇಹಳ್ಳದ ಸೇತುವೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಎರಡು ಗ್ರಾಮಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಶಾಲಾ ಮಕ್ಕಳಿಗೆ ಸಂಚಾರಕ್ಕೂ ಅಡ್ಡಿಯಾಗಿದೆ. ಸೇತುವೆ ನಿರ್ಮಾಣ ಕೇವಲ ಭೂಮಿ ಪೂಜೆಗೆ ಸೀಮಿತವಾಗಿದೆ ಎಂದು ಆರೋಪಿಸಿದರು.
ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಸರ್ಕಾರ ತುರ್ತಾಗಿ ಪರಿಹಾರ ನೀಡಬೇಕು. ಶಾಸಕರು ರೈತರ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕು. ನಿಲೋಗಿಪುರ ರಸ್ತೆಯಲ್ಲಿನ ಹಳ್ಳದ ಸೇತುವೆ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದ್ದು, ಶೀಘ್ರ ಅದನ್ನು ಪೂರ್ಣಗೊಳಿಸಬೇಕೆಂದರು.
ರೈತ ಸಂಪರ್ಕ ಕೇಂದ್ರಕ್ಕೆ ವಿಸಿಟ್: ಕೃಷಿ ಇಲಾಖೆ ಡಿಡಿ ಸಹದೇವ ಯರಗೊಪ್ಪ ಅವರನ್ನು ಭೇಟಿ ಮಾಡಿದ ಸಿವಿಸಿ, ತೇವಾಂಶ ಕೊರತೆಯಿಂದ ಬೆಳೆಗಳು ನಾಶವಾಗಿವೆ ತಕ್ಷಣ ಮಳೆಯಾದರೂ ಬೆಳೆಗಳು ಬರುವುದಿಲ್ಲ. ಹೀಗಾಗಿ ವಾಸ್ತವ ಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಹಾಗೂ ಬರಗಾಲ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೀರೇಶ ಮಹಾಂತಯ್ಯನಮಠ, ತಾಲೂಕು ಜೆಡಿಎಸ್ ಅಧ್ಯಕ್ಷ ಚನ್ನಪ್ಪ ಮುತ್ತಾಳ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭೀಮರಡ್ಡಿ ಗದ್ದಿಕೇರಿ, ಶರಣಪ್ಪ ಜಡಿ, ಸತೀಶ ಜಾಣಗಾರ, ಗೂಳರಡ್ಡಿ ತವದಿ, ಹನುಮಂತ ಜೋಗಿನ, ಚಂದ್ರಪ್ಪ ಜಂತ್ಲಿ, ಮಂಜುನಾಥ ಬೆದವಟ್ಟಿ, ವಸಂತರಡ್ಡಿ ಗದ್ದಿಕೇರಿ, ವಿರುಪಾಕ್ಷಿ ಜೋಳದ, ಖಾಜಾಸಾಬ್ ನದಾಫ್, ರಾಮಕೃಷ್ಣ ಬೀಳಗಿ, ಸಂಜೀವ ಇಮ್ಮಡಿ, ವಿಜಯ ದೋತರಗಾವಿ ಇತರರು ಇದ್ದರು.