ಧೈರ್ಯವಿದ್ದರೆ ಆರೋಪಕ್ಕೆ ಉತ್ತರ ನೀಡಲಿ: ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಂ ಸವಾಲು

JDS SC And ST unit district president press conference Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾಡಿರುವ ಆರೋಪಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉತ್ತರ ನೀಡಲಿ. ಅದನ್ನು ಬಿಟ್ಟು ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್ ಮಾತನಾಡಲು ನೈತಿಕತೆಯಿಲ್ಲ ಎಂದು ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಂ ಟೀಕಿಸಿದರು.

ಡಾ.ಅನ್ನದಾನಿ ಅವರ ವಿರುದ್ಧ ಶ್ರೀಧರ್ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ. ಅನ್ನದಾನಿ ಅವರು ನರೇಂದ್ರಸ್ವಾಮಿ ಅವರ ವಿರುದ್ಧ ಮಾತ್ರ ಆರೋಪ ಮಾಡಿಲ್ಲ. ಸಮ್ಮೇಳನದ ಎಲ್ಲ ಸಮಿತಿಗಳಲ್ಲೂ ಭ್ರಷ್ಟಾಚಾರವಾಗಿದೆ ಎಂದಿದ್ದಾರೆ. ಒಂದು ವೇಳೆ ನರೇಂದ್ರಸ್ವಾಮಿ ಅಧ್ಯಕ್ಷತೆಯ ಸಮಿತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದಾದರೆ ಅವರೇ ಹೇಳಿಕೆ ನೀಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅನ್ನದಾನಿ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಶ್ರೀಧರ್‌ಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಧೈರ್ಯವಿದ್ದರೆ ಉತ್ತರ ನೀಡಲಿ. ಇಲ್ಲವಾದಲ್ಲಿ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ. ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ಸ್ವಾರ್ಥಕ್ಕೆ ಪರಿಶಿಷ್ಟ ಜನಾಂಗವನ್ನು ಬಳಸಿಕೊಂಡು ಮೋಸವೆಸಗುತ್ತಿದ್ದಾರೆ. ಅಧಿಕಾರದ ಅಮಲಿನಲ್ಲಿರುವ ನರೇಂದ್ರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಆಗ ಕ್ಷೇತ್ರದ ಜನತೆ ತಕ್ಕ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ವಕ್ತಾರೆ ಪದ್ಮಾವತಿ, ನಗರಸಭಾ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ನವೀನ್‌ಕುಮಾರ್, ವೇಣುಗೋಪಾಲ್, ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net