

ಗದಗ: ಜಿಲ್ಲೆಯ ಅಭಿವೃದ್ಧಿ ಹಿನ್ನಡೆಗೆ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದ್ದು ಇದನ್ನು (ರಿವರ್ಸ ಡೆವೆಲಪ್ಮೆಂಟ್) ಖಂಡಿಸಿ ಫೆ 27 ರಂದು ಮಂಗಳವಾರ ಗದಗ ನಗರದ ಗಾಂಧಿ ವೃತ್ತದಿಂದ ತಹಸೀಲ್ದಾರ ಕಚೇರಿಗೆ ರಿವರ್ಸ ನಡೆದುಕೊಂಡು ಹೋಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ವಕ್ತಾರ ವಿ.ಆರ್.ಗೋವಿಂದಗೌಡ್ರ ಹೇಳಿದರು. ಅವರು ಸೋಮವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಗದಗ ಜಿಲ್ಲೆಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನಿರೀಕ್ಷಿತವಾದ ಅನುದಾನವನ್ನು ನೀಡಿಲ್ಲ, ಇದರ ಬಗ್ಗೆ ಸಚಿವರು ಹೆಚ್ಚು ಗಮನ ಹರಿಸಿಲ್ಲ. ಕಾಂಗ್ರೆಸ್ ಸರ್ಕಾರ ನನ್ನ ತೆರಿಗೆ ನನ್ನ ಹಕ್ಕು ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡ್ರಿಸುತ್ತಾರೆ, ಹಾಗದರೆ ಗದಗ ಜಿಲ್ಲೆಯಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 500 ಕೋಟಿಗೂ ಹೆಚ್ಚು ತೆರಿಗೆ ಸಂದಾಯವಾಗುತ್ತದೆ. ಆದರೆ ಮರಳಿ ಗದಗ ಜಿಲ್ಲೆಗೆ ನೀವು ಕೊಟ್ಟಿರುವುದಾದರೂ ಏನು ? ಅದಕ್ಕಾಗಿ ಜಿಲ್ಲಾ ಜೆಡಿಎಸ್ ನನ್ನ ತೆರಿಗೆ, ನನ್ನ ಹಕ್ಕು ಎಂದು ಹೋರಾಟ ಪ್ರಾರಂಭಿಸಲಿದೆ. ನಮ್ಮ ಹಕ್ಕು ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಈಗಾಗಲೇ ಟ್ಯಾಂಕರ್ ಮಾಫಿಯಾ ತಲೆ ಎತ್ತುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ಸರ್ಕಾರ ವಿಶೇಷ ಗಮನ ನೀಡಬೇಕು, ಇದಕ್ಕೆ ಗದಗ ಬೆಟಗೇರಿ ಅವಳಿ ನಗರವು ಕೂಡಾ ಹೊರತಾಗಿಲ್ಲ ಎಂದರು.
ಜೆಡಿಎಸ್ ಮುಖಂಡ ಎಂ.ಎಸ್.ಪರ್ವತಗೌಡ್ರ ಮಾತನಾಡಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಬೇಸಿಗೆ ಪೂರ್ವದಲ್ಲಿಯೇ ಕುಡಿಯುವ ನೀರಿನ ಸಮಸ್ಯೆಯಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ಸಮಸ್ಯೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಮೈಲಾರ ಜಾತ್ರೆಗಾಗಿ ತುಂಗಭದ್ರ ನದಿಗೆ ನೀರು ಬಿಡಲಾಗುತ್ತದೆ, ಆದರೆ ಸಚಿವ ಎಚ್.ಕೆ.ಪಾಟೀಲರು ಅವಳಿ ನಗರದ ನೀರಿನ ಸಮಸ್ಯೆ ನೀಗಿಸಲು ನದಿಗೆ ನೀರು ಬಿಡಿಸಿದ್ದೇನೆ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಬಸವರಾಜ ಅಪ್ಪಣ್ಣವರ, ದೇವಪ್ಪ ಮಲ್ಲಸಮುದ್ರ, ಪ್ರಪುಲ್ ಪಣೇಕರ ಮುಂತಾದವರು ಹಾಜರಿದ್ದರು