ರಾಜ್ಯ ಸರ್ಕಾರದ ಆಡಳಿತ ವೈಲ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆ

jds protest
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಶಿವಮೊಗ್ಗ ಡಿಸಿ ಕಚೇರಿ ಎದುರು ಜೆಡಿಎಸ್ ನಡೆಸಿದ ಪ್ರತಿಭಟನೆಯಲ್ಲಿ ಕಡಿದಾಳ್ ಗೋಪಾಲ್, ಕೆ.ಬಿ.ಪ್ರಸನ್ನಕುಮಾರ್, ರಾಕೇಶ್ ಡಿಸೋಜ, ದಾದಾಪೀರ್, ತ್ಯಾಗರಾಜ್, ದೀಪಕ್ ಸಿಂಗ್, ಮಧುಕುಮಾರ್, ಗೀತಾ ಸತೀಶ್, ಸಂಗಯ್ಯ, ನಿಖಿಲ್, ಗಂಧದಮನೆ ನರಸಿಂಹ, ಅಬ್ದುಲ್ ವಾಜಿದ್ ಇದ್ದರು.
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಆಡಳಿತ ವೈಲ್ಯ ಖಂಡಿಸಿ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನೆಹರು ರಸ್ತೆಯ ಪಕ್ಷದ ಕಚೇರಿಯಿಂದ ಅಮೀರ್ ಅಹಮ್ಮದ್ ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ಡಿಸಿ ಕಚೇರಿಗೆ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಿದರು. ಬಡವರು, ಮಧ್ಯಮ ವರ್ಗದ ಜನ ವಿರೋಧಿ ಸರ್ಕಾರವಾಗಿದೆ. ಗ್ಯಾರಂಟಿ ನೆಪದಲ್ಲಿ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಜಪದಲ್ಲಿ ಮುಳುಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಕೆಲಸ ಮಾಡಿದ ಗುತ್ತಿಗೆದಾರರಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಜನಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕಳೆದ ನಾಲ್ಕೈದು ತಿಂಗಳಿಂದ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದೆ. ಯುವನಿಧಿ ಹಣ ಯಾರಿಗೂ ಬರುತ್ತಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿಯೇ ಮೋಸದ ಯೋಜನೆ. ಈ ಸರ್ಕಾರ ಹೇಳುವುದೇ ಒಂದು, ಮಾಡುವುದು ಮತ್ತೊಂದು. ಐದು ಗ್ಯಾರಂಟಿ ಕೊಟ್ಟು ಜನರಿಂದ ಹೆಚ್ಚು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಪೊಲೀಸ್, ಕಂದಾಯ ಸೇರಿ ಎಲ್ಲ ಇಲಾಖೆಗಳ ಮೂಲಕವೂ ಸರ್ಕಾರ ಹಣ ಸಂಗ್ರಹಿಸುತ್ತಿದೆ. ಇದು ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಬದಲಾಗಿ ಮೋಸದ ಸರ್ಕಾರ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ದೂರಿದರು.

ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪಕ್ಷದ ಪ್ರಮುಖರಾದ ರಾಕೇಶ್ ಡಿಸೋಜ, ದಾದಾಪೀರ್, ತ್ಯಾಗರಾಜ್, ದೀಪಕ್ ಸಿಂಗ್, ಮಧುಕುಮಾರ್, ಗೀತಾ ಸತೀಶ್, ಸಂಗಯ್ಯ, ನಿಖಿಲ್, ಗಂಧದಮನೆ ನರಸಿಂಹ, ಅಬ್ದುಲ್ ವಾಜಿದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net