ಗ್ಯಾರಂಟಿ ಯೋಜನೆ ಹಣ ಬಿಡುಗಡೆಗೆ ಆಗ್ರಹ: ನಗರದಲ್ಲಿ ಜೆಡಿಎಸ್ ಪ್ರತಿಭಟನೆ

JDS protests against the state government Mandya
Published on

ಮಂಡ್ಯ: ರಾಜ್ಯಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ತಾರತಮ್ಯ ತೋರುತ್ತಿದೆ ಹಾಗೂ ಆಡಳಿತದ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ನಗರದಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಇದೀಗ ಆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದೆ ಜನರಿಗೆ ವಂಚನೆ ಮಾಡುತ್ತಿದೆ. ಅದರಲ್ಲೂ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸ್ವಂತ ಹಣವೆಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಪ್ರತಿ ತಿಂಗಳು ನೀಡದೆ, ಯಾವಾಗ ಬೇಕೋ ಆಗ ಮಾತ್ರ ಜಮೆ ಮಾಡುತ್ತಿದೆ. ಬಹುತೇಕ ಚುನಾವಣಾ ಸಂದರ್ಭದಲ್ಲೇ ಗೃಹಲಕ್ಷ್ಮೀ ಹಣ ಬಿಡುಗಡೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕು. ಚುನಾವಣೆ ಬಂದಾಗ 2 ಸಾವಿರ ರೂ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡುವುದು, ಉಳಿದಂತೆ ಅದನ್ನು ಮುಂದೂಡಿಕೆ ಮಾಡುವುದು ಸರಿಯಲ್ಲ. ಪ್ರತಿ ತಿಂಗಳು 1 ರಿಂದ 5ನೇ ತಾರೀಖಿನೊಳಗೆ ಹಣ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯದ ಜನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶಕ್ತಿ ಯೋಜನೆ ಪರಿಣಾಮ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಬಸ್‌ಗಳಿಲ್ಲದೆ ಕಷ್ಟಪಡುತ್ತಿದ್ದಾರೆ ಎಂದು ಆರೋಪಿಸಿದರು.

ಉಚಿತ ಭಾಗ್ಯಗಳನ್ನು ಕೊಡಲೆಂದೇ ಮಂತ್ರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಿಂಗಳು 5ರೊಳಗೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ, ಜನಪ್ರತಿನಿಧಿಗಳನ್ನು ಅಡ್ಡಹಾಕಲಾಗುವುದು. ಮಾತ್ರವಲ್ಲದೆ ಸಚಿವರ ಮನೆ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿಗಳೇ ಮೊದಲು ಹಣ ಬಿಡುಗಡೆ ಮಾಡಿ. ಅಥವಾ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡುತ್ತೀರಾ?. ಇದು ಕೊನೆಯ ಎಚ್ಚರಿಕೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸಬೆಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದಿನ ಸರ್ಕಾರ 9 ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿತು. ಆದರೆ, ಹಣ ಇಲ್ಲ ಎಂದು ನೆಪಹೇಳಿ ನೀವು ಮುಚ್ಚುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಯಾವ ಕಾರಣಕ್ಕೆ ಮುಚ್ಚುತ್ತಿದ್ದೀರಿ ಎಂದು ಜನಕ್ಕೆ ತಿಳಿಸಿ. 20 ತಿಂಗಳ ಆಡಳಿತದ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಇಲ್ಲವಾದರೆ ಕುರ್ಚಿ ಬಿಟ್ಟು ಹೋಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಂಜುಳಾ ಉದಯಶಂಕರ್, ಪದ್ಮಾವತಿ, ನೀನಾ ಪಟೇಲ್, ಬೇಲೂರು ಶಶಿಧರ್, ವಕೀಲ ಬಸವರಾಜು, ಕಂಸಾಗರ ರವಿ, ಸಾತನೂರು ಜಯರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net