

ಬೆಂಗಳೂರು: ರಿಯಲ್ ಎಸ್ಟೇಟ್ ದಂಧೆ ನಡೆಸುವುದು ಹಾಗೂ ಬೆಂಗಳೂರು ನಗರದಲ್ಲಿ ಕನ್ನಡಿಗರನ್ನು ಒಡೆದು ಆಳುವ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಏಳು ಭಾಗಗಳನ್ನಾಗಿ ಛಿಧ್ರ ಮಾಡಲು ಹೊರಟಿದೆ(Congress government is going to divide BBMP into seven parts in the name of Greater Bengaluru) ಎಂದು ಜೆಡಿಎಸ್(JDS) ಟೀಕಿಸಿದೆ.
ಗ್ರೇಟರ್ ಬೆಂಗಳೂರು ರಚನೆಯ ವಿರುದ್ಧ ಜೆಡಿಎಸ್ ಕಾರ್ಯರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಕೇವಲ ಭೂ ದಂಧೆ ನಡೆಸುವ ಏಕೈಕ ಉದ್ದೇಶ ಹಾಗೂ ಬೆಂಗಳೂರಿನಲ್ಲಿಯೇ ಕನ್ನಡಿಗರನ್ನು ಪರಕೀಯರನ್ನಾಗಿ ಮಾಡುವ ದುರುದ್ದೇಶದಿಂದ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದರು.
ವಿಧಾನಮಂಡಲದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರು ಜನರ ಭಾವನೆಗಳಿಗೆ ವಿರುದ್ಧವಾಗಿ ಗ್ರೇಟರ್ ಬೆಂಗಳೂರು ವಿಧೇಯಕ ಪಾಸ್ ಮಾಡಿಕೊಂಡಿದೆ. ರಾಜ್ಯಪಾರು ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಸಹಿ ಹಾಕಬಾರದು. ಆ ವಿಧೇಯಕವನ್ನು ತಿರಸ್ಕರಿಸಬೇಕು ಎಂದು ಕೋರುತ್ತೇವೆ. ಈ ಬಗ್ಗೆ ನಮ್ಮ ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರು ವಾಸ ಮಾಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರಿಲ್ಲ, ಸರಿಯಾದ ಮೂಲಸೌಕರ್ಯಗಳು ಇಲ್ಲ. ರಸ್ತೆಗುಂಡಿಗಳನ್ನು ಮುಚ್ಚಲು ಈ ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲ. ಈಗ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಜನರನ್ನು ಯಾಮಾರಿಸಲು ಹೊರಟಿದೆ ಎಂದು ಟೀಕಾಪ್ರಹಾರ ನಡೆಸಿದರು.
ಬೇಸಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ. ಆಗಲೇ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಒಂದು ನೀರಿನ ಟ್ಯಾಂಕರ್ ಗೆ ಐದರಿಂದ ಆರು ಸಾವಿರ ರೂ.ಕೊಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಂಗಳೂರಿನ ಜನ ನಿಜಕ್ಕೂ ದಿನನಿತ್ಯವೂ ಸತ್ತು ಬದುಕುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣ ಎಂದು ಆರೋಪ ಮಾಡಿದರು.
ಕೂಡಲೇ ಗ್ರೇಟರ್ ಬೆಂಗಳೂರು ವಿಧೇಯಕವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲವಾದರೆ ನಗರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕರ ಕಾರ್ಯಕ್ರಮಗಳನ್ನು ನಡೆಯಲು ಬಿಡುವುದಿಲ್ಲ. ಅಲ್ಲೆಲ್ಲ ನಾವು ಪಕ್ಷದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಮತ್ತೆ ಹಾಲಿನ ದರ ಏರಿಕೆ ಮಾಡಲು ಈ ಸರ್ಕಾರ ಹೊರಟಿದೆ. ಈ ಸರ್ಕಾರ ಬಂದಂದಿನಿಂದ 43,000 ಕೋಟಿ ರೂ. ಹೆಚ್ಚುವರಿ ತೆರಿಗೆ ಹಾಕಿದೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಜವರಾಯಿಗೌಡ, ಮಾಜಿ ಎಂಎಲ್ ಸಿ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾವ್, ಮುಖಂಡರಾದ ನಾಗೇಶ್ ರಾವ್, ವೆಂಕಟಸ್ವಾಮಿ, ವೇಣುಗೋಪಾಲ್, ಮಂಗಳಮ್ಮ ಪ್ರವೀಣ್ ಕುಮಾರ್, ಸ್ಯಾಮುಯಲ್, ಅಪ್ರೋಜ್ ಬೇಗ್ ಸೇರಿದಂತೆ ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳ ಪಕ್ಷದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.